alex Certify ಅಡಿಕೆ ಆಮದು ರದ್ದುಗೊಳಿಸಲು ಆಗ್ರಹಿಸಿ ಅ.14ರಂದು ಬೃಹತ್ ಪ್ರತಿಭಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಕೆ ಆಮದು ರದ್ದುಗೊಳಿಸಲು ಆಗ್ರಹಿಸಿ ಅ.14ರಂದು ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಅಡಿಕೆ ಆಮದನ್ನು ರದ್ದುಗೊಳಿಸಲು ಒತ್ತಾಯಿಸಿ ಅ.14ರಂದು ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.

ಅವರು ಇಂದು ಶಿವಮೊಗ್ಗದ ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಿಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟ ಹಾಗೂ ಅಡಿಕೆ ವರ್ತಕರ ಸಂಘದ ಸಹಕಾರದೊಂದಿಗೆ ಅಂದು ಬೆಳಿಗ್ಗೆ 10ಗಂಟೆಗೆ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಛೇರಿ ಆವರಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಅಲ್ಲಿ ಪ್ರತಿಭಟನಾ ಸಭೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿ, ಕೇಂದ್ರದ ವಾಣಿಜ್ಯ, ಕೃಷಿ ಸಚಿವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಭೂತಾನ್‌ನಿಂದ 17ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಪ್ರತಿವರ್ಷ ಎಂಐಪಿ ಷರತ್ತು ಇಲ್ಲದೆ ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು, ಇದು ಮುಂದಿನ ದಿನಗಳಲ್ಲಿ 50ಸಾವಿರ ಮೆಟ್ರಿಕ್ ಟನ್‌ಗಿಂತಲೂ ಆಮದನ್ನು ಹೆಚ್ಚಿಸಬಹುದು. ಆಗ ನಮ್ಮ ದೇಶದ ಅಡಿಕೆ ಬೆಲೆಯು ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂದರು.

ರೈತ ಸಂಘಟನೆ ಮತ್ತು ಅಡಿಕೆ ಸಹಕಾರಿ ಸಂಸ್ಥೆಗಳು ಪರಿಷ್ಕರಣಾ ಕೆ.ಜಿ ಅಡಿಕೆಗೆ ಆಮದು ಸುಂಕವನ್ನು 260 ರೂ. ನಿಂದ 360ರೂ. ಗಳಿಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಈಗಾಗಲೇ ಬೇಡಿಕೆಯನ್ನು ಸಲ್ಲಿಸಿವೆ. ಹೀಗಿರುವಾಗ ಕೇಂದ್ರ ಸರ್ಕಾರ ಆಮದು ಸುಂಕವಿಲ್ಲದೆ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ಭಾರತ ದೇಶದಲ್ಲಿ ವಾರ್ಷಿಕವಾಗಿ 8 ರಿಂದ 10ಲಕ್ಷ ಮೆಟ್ರಿಕ್ ಟನ್ ಅಡಿಕೆ ಬೆಳೆಯಲಾಗುತ್ತಿದೆ. ಈ ಪ್ರಮಾಣದ ಉತ್ಪಾದನೆಯಿಂದ ಸ್ಥಳೀಯ ಬೇಡಿಕೆ ಪೂರೈಕೆ ಜೊತೆಗೆ ರಫ್ತು ಕೂಡ ಮಾಡಬಹುದು. ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶದ ರಾಜ್ಯಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತರಣೆಯಾಗಿದ್ದು ಇನ್ನು 4-5ವರ್ಷಗಳಲ್ಲಿ ದೇಶದಲ್ಲಿ 15ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದರು.

ಗೃಹ ಮಂತ್ರಿ ಮತ್ತು ಅಡಿಕೆ ಕಾರ್ಯಪಡೆ ಅಧ್ಯಕ್ಷ ಆರಗ ಜ್ಞಾನೇಂದ್ರರವರು ಕೇಂದ್ರ ಸರ್ಕಾರಕ್ಕೆ ನಿಯೋಗ ಕರೆದುಕೊಂಡು ಹೋಗಲಾಗುವುದು ಎಂದು ಹೇಳಿರುವುದು ಸ್ವಾಗತಾರ್ಹ. ಅದಷ್ಟು ಬೇಗ ನಿಯೋಗ ಹೋಗಬೇಕೆಂದು ಒತ್ತಾಯಿಸಿದರು. ಅಡಿಕೆ ಆಮದು ಮಾಡಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರದ ಹಿಂದೆ ಗುಟ್ಕಾ ಕಂಪನಿಗಳ ಹುನ್ನಾರವಿದೆ. ನೇಪಾಳ, ಶ್ರೀಲಂಕಾದಿಂದಲೂ ನಮ್ಮ ದೇಶಕ್ಕೆ ಅಡಿಕೆ ಆಮದಾಗುತ್ತಿದೆ. ಇದು ಭವಿಷ್ಯದಲ್ಲಿ ದೇಶಿ ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗೂ ದೇಶದ ಅಡುಕೆ ಬೆಳೆಗಾರರಿಗೆ ಮರಣ ಶಾಸನವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಅಡಿಕೆ ಆಮದನ್ನು ರದ್ದುಗೊಳಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...