ಜಪಾನಿನ ವಾಹನ ತಯಾರಕ ಕಂಪನಿ ಟೊಯೊಟಾ, ಮಾರುತಿ ಸುಜುಕಿ ಜೊತೆ ಪಾಲುದಾರಿಕೆ ಮಾಡಿಕೊಂಡು ಅನೇಕ ಕಾರುಗಳನ್ನು ಮಾರಾಟ ಮಾಡುತ್ತದೆ. ಬಲೆನೊ ಆಧಾರಿತ ಗ್ಲಾನ್ಜಾ, ಮಾರುತಿ ವಿಟಾರಾ ಬ್ರೀಝಾ ಆಧಾರಿತ ಟೊಯೊಟಾ ಅರ್ಬನ್ ಕ್ರೂಸರ್ ಹೀಗೆ ಹಲವು ಕಾರುಗಳನ್ನು ನೀವು ಗಮನಿಸಿರಬಹುದು.
ಈ ವರ್ಷ ಮಾರುತಿ ತನ್ನ ವಿಟಾರಾ ಬ್ರೀಝಾವನ್ನು ಮಾರುತಿ ಬ್ರೆಝಾ ಆಗಿ ನವೀಕರಿಸಿದೆ. ಇದರ ನೋಟ ಮತ್ತು ವೈಶಿಷ್ಟ್ಯಗಳನ್ನು ಸಹ ಬದಲಾಯಿಸಲಾಗಿದೆ. ಆದರೆ ಟೊಯೊಟಾ ಮಾತ್ರ ಹಳೆಯ ಮಾದರಿಯ ಅರ್ಬನ್ ಕ್ರೂಸರ್ ಅನ್ನು ಹೊಂದಿದೆ. ಹಾಗಾಗಿ ಗ್ರಾಹಕರಿಗೆ ಟೊಯೊಟಾ ಅರ್ಬನ್ ಕ್ರೂಸರ್ ಅಷ್ಟೇನೂ ಇಷ್ಟವಾಗಿಲ್ಲ. ಈ ಮಾದರಿಯ ಒಂದೇ ಒಂದು ಕಾರು ಕೂಡ ಮಾರಾಟವಾಗಲಿಲ್ಲ.
ಇದೀಗ ಟೊಯೊಟಾ ತನ್ನ ವೆಬ್‌ಸೈಟ್‌ನಿಂದ್ಲೇ ಅರ್ಬನ್ ಕ್ರೂಸರ್ ಹೆಸರನ್ನು ತೆಗೆದುಹಾಕಿದೆ. ಈ ಹಿಂದೆ ಅರ್ಬನ್ ಕ್ರೂಸರ್ ಚೆನ್ನಾಗಿ ಸೇಲ್ ಆಗುತ್ತಿತ್ತು. ಪ್ರತಿ ತಿಂಗಳು ಸರಾಸರಿ 2000 ರಿಂದ 3000 ಯೂನಿಟ್ ಮಾರಾಟವಾಗುತ್ತಿತ್ತು. ಆದರೆ ಅಕ್ಟೋಬರ್ ತಿಂಗಳಿನಲ್ಲಿ ಅರ್ಬನ್ ಕ್ರೂಸರ್ ಮಾರಾಟವು ಸೊನ್ನೆಗೆ ಇಳಿದಿದೆ. ಸೆಪ್ಟೆಂಬರ್‌ನಲ್ಲಿ ಕೇವಲ 330 ಕಾರುಗಳು ಬಿಕರಿಯಾಗಿವೆ, ಹಾಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಎಸ್‌ಯುವಿಗಳ ಲಿಸ್ಟ್‌ನಲ್ಲಿ ಪಟ್ಟಿ ಮಾಡಿಲ್ಲ.
ಟೊಯೊಟಾ ಕಂಪನಿ ಅರ್ಬನ್ ಕ್ರೂಸರ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಟೊಯೊಟಾದ ಈ ಸಬ್-ಕಾಂಪ್ಯಾಕ್ಟ್ SUV ಬೆಲೆ 9.03 ಲಕ್ಷದಿಂದ ರೂ 11.73 ಲಕ್ಷ ರೂಪಾಯಿವರೆಗೆ ಇದೆ. ಮಿಡ್, ಹೈ ಮತ್ತು ಪ್ರೀಮಿಯಂ ಫೀಚರ್‌ಗಳಲ್ಲಿ ಇದು ಲಭ್ಯವಿತ್ತು. ವಾಹನವು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಇದು ಹೊಂದಿದೆ.