ಎಸ್.ಪಿ.ಬಾಲಸುಬ್ರಮಣ್ಯಂ ಎಂಬ ಅದ್ಭುತ ಪ್ರತಿಭೆ ಜನಿಸಿದ್ದು ನೆಲ್ಲೋರ್‌ನಲ್ಲಿ, ಅವರದ್ದು ತೆಲುಗಿನ ಕುಟುಂಬ. ಅವರ ತಂದೆ ಎಸ್.ಪಿ. ಸಾಂಬಮೂರ್ತಿ ಹರಿಕಥೆ ಕಲಾವಿದರಾಗಿದ್ದರು. ನಾಟಕಗಳಲ್ಲೂ ಅವರು ನಟಿಸಿದ್ದಾರೆ. ತಾಯಿ ಶಕುಂತಲಮ್ಮ. ಎಸ್‌ಪಿಬಿ ಅವರಿಗೆ ಇಬ್ಬರು ಸೋದರರು ಮತ್ತು ಐವರು ಸಹೋದರಿಯರಿದ್ದಾರೆ. ಗಾಯಕಿ ಎಸ್.ಪಿ. ಶೈಲಜಾ ಕೂಡ ಅವರಲ್ಲೊಬ್ಬರು.
ಬಾಲಸುಬ್ರಮಣ್ಯಂ ಅವರ ಪುತ್ರ ಎಸ್.ಪಿ. ಚರಣ್, ದಕ್ಷಿಣದ ಖ್ಯಾತ ಗಾಯಕ. ಸಿನೆಮಾಗಳಲ್ಲೂ ನಟಿಸಿರೋ ಅವರು ಚಿತ್ರ ನಿರ್ಮಾಣವನ್ನೂ ಮಾಡಿದ್ದಾರೆ. ಎಸ್‌ಪಿಬಿ ಅವರಿಗೆ ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಒಲವಿತ್ತು. ಆದರೂ ಎಂಜಿನಿಯರ್ ಆಗುವ ಹಂಬದಲ್ಲಿ ಅನಂತಪುರದ ಜೆಎನ್‌ಟಿಯು ಕಾಲೇಜು ಸೇರಿದ್ದರು.
ಟೈಫಾಯಿಡ್ ಕಾಣಿಸಿಕೊಂಡಿದ್ದರಿಂದ ಅರ್ಧಕ್ಕೇ ಕಾಲೇಜು ಬಿಡಬೇಕಾಗಿ ಬಂದಿತ್ತು. ನಂತರ ಅವರು ಚೆನ್ನೈಗೆ ತೆರಳಿದ್ದು. ಓದಿನ ಜೊತೆ ಜೊತೆಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡ್ರು. ಕಾಲೇಜು ದಿನಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದರು.
1966ರಲ್ಲಿ ನರಸಿಂಹರಾಜು ಅಭಿನಯದ ನಕ್ಕರೆ ಅದೇ ಸ್ವರ್ಗ ಚಿತ್ರದಲ್ಲಿ ಹಾಡುವ ಮೂಲಕ ಎಸ್‌ಪಿಬಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಹೀಗೆ ಶುರುವಾದ ಮ್ಯೂಸಿಕಲ್ ಜರ್ನಿ ಯಶಸ್ಸಿನ ಶಿಖರವನ್ನೇ ಏರಿತ್ತು. ವಿಶೇಷ ಅಂದ್ರೆ ಒಂದೇ ದಿನ ಅತಿ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಎಸ್‌ಪಿಬಿ ದಾಖಲೆ ಬರೆದಿದ್ದಾರೆ. ಉಪೇಂದ್ರ ಕುಮಾರ್ ಸಂಗೀತ ನಿರ್ದೇಶದಲ್ಲಿ 1981ರ ಫೆಬ್ರವರಿ 8ರಂದು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಒಟ್ಟು 21 ಕನ್ನಡ ಗೀತೆಗಳನ್ನು ಅವರು ಹಾಡಿದ್ದಾರೆ.
ಅದೇ ರೀತಿ ತಮಿಳಿನಲ್ಲಿ 19 ಹಾಗೂ ಹಿಂದಿಯಲ್ಲಿ 16 ಹಾಡುಗಳನ್ನು ಒಂದೇ ದಿನ ರೆಕಾರ್ಡ್ ಮಾಡಿರುವುದು ಮತ್ತೊಂದು ವಿಶೇಷ. ಪಿ.ಸುಶೀಲಾ, ಎಸ್.ಜಾನಕಿ. ಎಲ್.ಆರ್.ಈಶ್ವರಿ ಹಾಗೂ ವಾಣಿ ಜಯರಾಂ ಅವರೊಂದಿಗೆ ಅನೇಕ ಅದ್ಭುತ ಹಾಡುಗಳನ್ನು ಎಸ್‌ಪಿಬಿ ಹಾಡಿದ್ದಾರೆ.
ಇಳೆಯರಾಜ, ಎ.ಆರ್.ರೆಹಮಾನ್ ಅವರಂತಹ ಖ್ಯಾತನಾಮರೊಂದಿಗೆ ಎಸ್‌ಪಿಬಿ ಗುರುತಿಸಿಕೊಂಡಿದ್ದರು. 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ಬಾಲು ಸಂಗೀತ ಪ್ರಿಯರಿಗೆ ರಸದೌತಣವನ್ನೇ ಉಣಬಡಿಸಿದ್ದಾರೆ. ಎಸ್‌ಪಿಬಿ ನಮ್ಮೊಂದಿಗಿಲ್ಲದಿದ್ದರೂ ಅವರ ಅದ್ಭುತ ಕಂಠ, ಮರೆಯಲಾಗದಂತಹ ಹಾಡುಗಳು ಎಂದಿಗೂ ಅಜರಾಮರ.