ಚಾಪರ್ ಬುಕ್ಕಿಂಗ್ ಟಿಕೆಟ್ ನೀಡುವ ನೆಪದಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ವೆಬ್ಸೈಟ್ಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸೈಬರ್ ಇಲಾಖೆಗೆ ಶ್ರೀಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯು ದೂರನ್ನು ನೀಡಿದೆ.
ಈ ವಿಚಾರವಾಗಿ ಮಾತನಾಡಿದ ಶ್ರೀಮಾತಾ ವೈಷ್ಣೋದೇವಿ ದೇಗುಲ ಮಂಡಳಿಯ ಸಿಇಓ ರಮೇಶ್ ಕುಮಾರ್, ನಕಲಿ ಹೆಲಿಕಾಪ್ಟರ್ ಟಿಕೆಟ್ ಬುಕ್ಕಿಂಗ್ ವೆಬ್ಸೈಟ್ಗಳ ಬಗ್ಗೆ ಯಾತ್ರಾರ್ಥಿಗಳಿಂದ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಭಕ್ತರು ನಮಗೆ ಈ ನಕಲಿ ವೆಬ್ಸೈಟ್ಗಳ ವಂಚನೆ ಬಗ್ಗೆ ದೂರು ನೀಡಿದ್ದಾರೆ. ನಾವು ಭಕ್ತರ ಬಳಿ ಇಂತಹ ಮೋಸದ ಜಾಲಕ್ಕೆ ಬೀಳದಂತೆ ಮನವಿ ಮಾಡಿದ್ದೇವೆ. ಅಧಿಕೃತ ವೆಬ್ಸೈಟ್ಗಳು ಅಥವಾ ಮೊಬೈಲ್ ಆ್ಯಪ್ಗಳ ಮೂಲಕವೇ ಬುಕ್ಕಿಂಗ್ ಮಾಡಿ ಎಂದು ಹೇಳಿದ್ದೇವೆ ಎಂದು ಕುಮಾರ್ ಹೇಳಿದ್ರು.
ಇಂತಹ ವೆಬ್ಸೈಟ್ಗಳನ್ನು ಬ್ಲಾಕ್ ಮಾಡುವಂತೆ ಗೂಗಲ್ಗೂ ಪತ್ರ ಬರೆದಿದ್ದೇವೆ. ಅಲ್ಲದೇ ಜಮ್ಮು & ಕಾಶ್ಮೀರ ಠಾಣೆಯಲ್ಲಿ ಎಫ್ಐಆರ್ನ್ನೂ ದಾಖಲಿಸಿದ್ದೇವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಭಕ್ತರ ಬಳಿ ಇಂತಹ ಮೋಸದ ಜಾಲಕ್ಕೆ ಬೀಳದಂತೆ ಮನವಿ ಮಾಡುತ್ತಿದ್ದೇನೆ ಎಂದು ಕುಮಾರ್ ಹೇಳಿದರು.