ಅಂತಾರಾಷ್ಟ್ರೀಯ ಮಹಿಳಾ ದಿನದಂದು ಇ ಕಾಮರ್ಸ್ ಫ್ಲಾಟ್ಫಾರಂ ತನ್ನ ಅಡುಗೆ ಉಪಕರಣಗಳನ್ನು ಪ್ರಚಾರ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಬಳಿಕ ಇಂದು ತಾನು ಮಾಡಿದ ತಪ್ಪಿಗೆ ಸೋಶಿಯಲ್ ಮೀಡಿಯಾದಲ್ಲಿ ಫ್ಲಿಪ್ಕಾರ್ಟ್ ಕ್ಷಮೆಯಾಚಿಸಿದೆ.
ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಫ್ಲಿಪ್ಕಾರ್ಟ್, ಆತ್ಮೀಯ ಗ್ರಾಹಕರೇ….. ಈ ಮಹಿಳಾ ದಿನಾಚರಣೆಯನ್ನು ನಾವು ಆಚರಿಸೋಣ, 299 ರೂಪಾಯಿಗಳಿಂದ ನಿಮ್ಮ ಅಡುಗೆ ಉಪಕರಣಗಳನ್ನು ಖರೀದಿ ಮಾಡಿ ಎಂದು ಸಂದೇಶವನ್ನು ಶೇರ್ ಮಾಡಿತ್ತು. ಆದರೆ ಇದು ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸುವಂತಿದೆ ಎಂದು ಅನೇಕರು ಜಾಹೀರಾತಿನ ವಿರುದ್ಧ ಅಪಸ್ವರವನ್ನು ತೆಗೆದಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಫ್ಲಿಪ್ಕಾರ್ಟ್ ವಿರುದ್ಧ ಸಂದೇಶಗಳು ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಫ್ಲಿಪ್ಕಾರ್ಟ್ ಇಂದು ಟ್ವಿಟರ್ನಲ್ಲಿ ಕ್ಷಮೆಯಾಚಿಸಿದೆ.
ನಾವು ತಪ್ಪು ಮಾಡಿದ್ದೇವೆ ಕ್ಷಮಿಸಿ. ಯಾರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಹೀಗಾಗಿ ನಾವು ಮಹಿಳಾ ದಿನದಂದು ಶುಭಾಶಯ ಕೋರಿದ ರೀತಿಗೆ ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಬರೆದುಕೊಂಡಿದೆ.