
ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸಲಾಗಿದೆ ಎಂದ ಮಾತ್ರಕ್ಕೆ ಅದನ್ನು ಸಮ್ಮತದ ಸೆಕ್ಸ್ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಮುಂಬೈನ ಸೆಷನ್ ಕೋರ್ಟ್ ಹೇಳಿದೆ. ಸಹೋದ್ಯೋಗಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ನೌಕಾಯಾನ ಸಿಬ್ಬಂದಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸುವ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ.
ಘಟನೆ ನಡೆದ ಸ್ಥಳದಲ್ಲಿ ಕಾಂಡೋಮ್ ಸಿಕ್ಕಿದ್ದರೂ ಸಹ ಅತ್ಯಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೆಲ್ಲದರ ಹೊರತಾಗಿಯೂ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
ಘಟನೆ ನಡೆದ ಸ್ಥಳದಲ್ಲಿ ಕಾಂಡೋಮ್ ಪತ್ತೆಯಾಗಿದೆ ಎಂದ ಮಾತ್ರಕ್ಕೆ ಆರೋಪಿಯು ಮಹಿಳೆಯ ಜೊತೆ ಸಮ್ಮತದ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಹೇಳಲು ಸಾಧ್ಯವಿಲ್ಲ. ಆರೋಪಿಯು ಮುಂದೆ ಯಾವುದೇ ರೀತಿಯ ಅಪಾಯ ಎದುರಾಗಬಾರದು ಎಂಬ ಕಾರಣಕ್ಕೆ ಕಾಂಡೋಮ್ ಬಳಸಿದ್ದಿರಲೂಬಹುದು ಎಂದು ಕೋರ್ಟ್ ಹೇಳಿದೆ.
ಆರೋಪಿ ಹಾಗೂ ಸಂತ್ರಸ್ತೆ ಒಂದೇ ಕ್ವಾರ್ಟಸ್ನಲ್ಲಿ ವಾಸವಿದ್ದರು. ದೂರಿನಲ್ಲಿ ಸಂತ್ರಸ್ತೆ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಯು ತನ್ನ ಪತಿ ಕೇರಳಕ್ಕೆ ತರಬೇತಿಗೆಂದು ತೆರಳಿದ್ದ ಸಂದರ್ಭದಲ್ಲಿ ಅಂದರೆ ಏಪ್ರಿಲ್ 29ರಂದು ತಮ್ಮ ನಿವಾಸಕ್ಕೆ ಬಂದಿದ್ದರು. ಆರೋಪಿ ನನಗೆ ತಿನ್ನಲು ಚಾಕಲೇಟ್ ನೀಡಿದ್ದರು. ಈ ಚಾಕಲೇಟ್ ಸೇವನೆ ಮಾಡಿದ ಬಳಿಕ ನನಗೆ ವಿಪರೀತ ತಲೆನೋವು ಆರಂಭವಾಯ್ತು. ಇದಾದ ಬಳಿಕ ಆರೋಪಿಯು ನನಗೆ ಪದೇ ಪದೇ ಪ್ಯಾರಾಸೆಟಮೋಲ್ ಮಾತ್ರೆಗಳನ್ನು ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಾದ ಕೆಲವು ಸಮಯದ ಬಳಿಕ ಆರೋಪಿಯು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅತ್ಯಾಚಾರದಿಂದ ಬಚಾವಾಗಲು ತಾನು ಆರೋಪಿಗೆ ಬ್ಲೇಡ್ನಿಂದ ಗಾಯ ಮಾಡಿದ್ದೇನೆ. ಆದರೆ ಆರೋಪಿಯನ್ನು ತಡೆಯಲು ಸಾಧ್ಯವಾಗದೇ ಇದ್ದಾಗ ನಾನು ನನ್ನ ಮಣಿಕಟ್ಟಿಗೆ ಬ್ಲೇಡ್ನಿಂದ ಗಾಯ ಮಾಡಿಕೊಂಡೆ. ಇದಾಗಿ ಮಾರನೇ ದಿನ ನಾನು ಪತಿಯ ಬಳಿ ಎಲ್ಲವನ್ನೂ ಹೇಳಿಕೊಂಡೆ. ಇದಾದ ಬಳಿಕ ದೂರು ದಾಖಲಿಸಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ.
ಆದರೆ ಆರೋಪಿ ನೀಡಿರುವ ಮಾಹಿತಿಯ ಪ್ರಕಾರ ತಾನು ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮನೆಯಲ್ಲಿ ಇನ್ನೊಬ್ಬ ಸದಸ್ಯ ಕೂಡ ಇದ್ದರು. ಹೀಗಾಗಿ ಅತ್ಯಾಚಾರ ಮಾಡಲು ಹೇಗೆ ಸಾಧ್ಯ..? ಘಟನಾ ಸ್ಥಳದಲ್ಲಿ ಕಾಂಡೋಮ್ ಪತ್ತೆಯಾಗಿದೆ ಅಂದರೆ ಅಲ್ಲಿ ಸಮ್ಮತದ ಲೈಂಗಿಕ ಕ್ರಿಯೆ ನಡೆದಿದೆ ಎಂದು ಹೇಳಿದ್ದರು. ಆದರೆ ಈ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಆದರೆ ಆರೋಪಿಗೆ ಜಾಮೀನನ್ನು ನೀಡಿದೆ.