ದೇಶದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ನಡೆಯುತ್ತಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇತ್ತ ಕೊರೊನಾ ಲಸಿಕೆ ನೀಡುವ ಕಾರ್ಯವೂ ಭರದಿಂದ ಸಾಗಿದೆ. ಕೆಲವೊಂದು ಕಡೆಗಳಲ್ಲಂತೂ ಕೊರೊನಾ ಲಸಿಕೆ ಪಡೆದವರೂ ಕೂಡ ಸೋಂಕಿಗೆ ಒಳಗಾಗುತ್ತಿದ್ದಾರೆ.
ಕೊರೊನಾ ಲಸಿಕೆಯನ್ನ ಪಡೆಯೋದ್ರಿಂದ ಸೋಂಕಿನ ಅಪಾಯದಿಂದ ಒಂದು ಹೆಜ್ಜೆ ದೂರ ಹೋಗಬಹುದು. ಹಾಗಂತ ಲಸಿಕೆ ಪಡೆದವರಿಗೆ ಕೊರೊನಾ ಸೋಂಕಿನ ಅಪಾಯವೇ ಇರೋದಿಲ್ಲ ಎಂದು ಹೇಳಲಾಗೋದಿಲ್ಲ.
ಲಸಿಕೆ ಪಡೆದ ಬಳಿಕವೂ ನೀವು ಸೋಂಕಿಗೆ ಒಳಗಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಕೊರೊನಾ ಲಸಿಕೆ ಪಡೆದ ಬಳಿಕವು ನೀವು ಮುಂಜಾಗ್ರತೆ ವಹಿಸೋದು ಅತ್ಯಗತ್ಯ.
ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆಯುತ್ತಿದ್ದಂತೆಯೇ ಬಹುತೇಕ ಮಂದಿ ಮಾರ್ಗಸೂಚಿಗಳನ್ನ ಮರೆತುಬಿಡ್ತಾರೆ. ಆದರೆ ಈ ರೀತಿ ಮಾಡೋದ್ರಿಂದ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಾಗುತ್ತೆ. ಹೀಗಾಗಿ ಲಸಿಕೆ ಪಡೆದ ಬಳಿಕವೂ ಮಾಸ್ಕ್ ಧರಿಸಿ. ಮೂಗು ಹಾಗೂ ಬಾಯಿಯನ್ನ ಪದೇ ಪದೇ ಮುಟ್ಟಿಕೊಳ್ಳಬೇಡಿ.
ಸದ್ಯ ಸಂಪೂರ್ಣ ದೇಶದಲ್ಲಿ ಲಾಕ್ಡೌನ್ ಜಾರಿಯಾಗಿಲ್ಲ. ಅಲ್ಲದೇ ಆಫೀಸುಗಳೂ ಆರಂಭವಾಗಿರೋದ್ರಿಂದ ಟ್ರಾವೆಲ್ ಮಾಡೋದು ಅನಿವಾರ್ಯವಾಗಿದೆ. ಹೀಗಾಗಿ ಪ್ರಯಾಣದ ವೇಳೆಯಲ್ಲಿ ಫೇಸ್ ಶೀಲ್ಡ್, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಮರೆಯದಿರಿ.
ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿ ಅದರಿಂದ ಪಾರಾದ ಅನೇಕರು ಈಗ ಲಸಿಕೆಯನ್ನ ಪಡೆಯತ್ತಿಲ್ಲ. ನಮ್ಮ ದೇಹದಲ್ಲಿ ಆಂಟಿ ಬಾಡಿ ಇದೆ ಎಂಬ ನಂಬಿಕೆಯಲ್ಲೇ ಇದ್ದಾರೆ. ಆದರೆ ಇದು ತಪ್ಪು. ನೀವು ಕೊರೊನಾವನ್ನ ಜಯಿಸಿದ್ದರೂ ಸಹ ಮರುಸೋಂಕಿನಿಂದ ಬಚಾವಾಗೋಕೆ ಲಸಿಕೆಯನ್ನ ಹಾಕಿಸಿಕೊಳ್ಳಿ.