ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂಬ ಅಭಿಯಾನ ಆರಂಭವಾದ ಬಳಿಕ ನಮ್ಮ ಎಚ್ಚರಿಕೆ ನಾವು ಮಾಡುವುದು ಮಾತ್ರ ಉಳಿದಿದೆ.
ಹೊರಗೆ ತಿರುಗಾಡಲು, ಮಾಲ್ ಮಳಿಗೆಗಳಿಗೆ ಶಾಪಿಂಗ್ ಹೋಗುವ ಮುನ್ನ ಅದರ ಅಗತ್ಯ ಇದೆಯೇ ಎಂದು ಮತ್ತೊಮ್ಮೆ ಆಲೋಚಿಸುವುದಷ್ಟೇ ಇದಕ್ಕೆ ಪರಿಹಾರ.
ಕಚೇರಿಯಲ್ಲಿ ಕೆಲಸ ಮಾಡುವಲ್ಲಿ ನಿಮ್ಮ ಸಮೀಪ ಕುಳಿತುಕೊಳ್ಳುವವರಿಗೆ ಅಥವಾ ನೆರೆಮನೆಯವರಿಗೆ ಸೋಂಕು ಬಂದರೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿ ಕೆಲವು ಟಿಪ್ಸ್ ಗಳಿವೆ.
ಮಾಸ್ಕ್ ಧರಿಸದೆ ಹೊರಗೆ ಹೋಗಬೇಡಿ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಲಿಫ್ಟ್ ಬದಲು ಮೆಟ್ಟಿಲು ಬಳಸಿ. ಎಸಿ ಹಾಕಿ ಬಾಗಿಲು ಮುಚ್ಚಿ ಕೂರುವ ಬದಲು ಸಾಧ್ಯವಾದಷ್ಟು ಹೊರಗಿನ ಗಾಳಿಯಾಡಲು ಬಿಡಿ. ಮುಚ್ಚಿಟ್ಟ ಪ್ರದೇಶದಲ್ಲಿ ಮಾತ್ರ ಹೆಚ್ಚು ಸೋಂಕು ಹರಡುತ್ತದೆ, ಗಾಳಿಯಾಡುತ್ತಿದ್ದರೆ ಹೆಚ್ಚು ಸಮಸ್ಯೆಗಳಿಲ್ಲ ಎಂಬುದನ್ನು ಇತ್ತೀಚಿನ ಕೆಲ ಸಂಶೋಧನೆಗಳು ಹೇಳಿವೆ.
ಬಾಗಿಲಿನ ಹಿಡಿ, ಟೇಬಲ್, ಲೈಟ್ ಸ್ವಿಚ್ ಗಳಿಗೆ ಸೋಂಕು ನಿವಾರಕ ಸಿಂಪಡಿಸಿ. ನಿಮ್ಮ ಕೈಯನ್ನೂ ಆಗಾಗ ಸ್ಪ್ರೇ ಹಾಕಿ ತೊಳೆಯುತ್ತಿರಿ. ಸದ್ಯ ಸಿಗುವ ಸಣ್ಣ ಸ್ಯಾನಿಟೈಸರ್ ಗಳನ್ನು ಜೇಬಿನಲ್ಲೇ ಇಟ್ಟುಕೊಳ್ಳಿ. ಹೊರಗಿನಿಂದ ಬಂದ ಲೆಟರ್, ಪತ್ರಿಕೆ ಅಥವಾ ಇತರ ಕೊರಿಯರ್ ವಸ್ತುಗಳನ್ನು ಮುಟ್ಟಿದ ಬಳಿಕ ಮರೆಯದೆ ಕೈತೊಳೆದುಕೊಳ್ಳಿ.
ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಬಿಸಿ ಬಿಸಿ ನೀರು ಕುಡಿಯಿರಿ. ದಿನಕ್ಕೆ ಎರಡು ಬಾರಿ ಮನೆಯಲ್ಲೇ ತಯಾರಿಸಿದ ಕಷಾಯ ಕುಡಿಯಿರಿ, ಆರಾಮವಾಗಿರಿ. ಅವಶ್ಯಕವಾಗಿ ಹೊರಗೆ ಹೋಗಲೇಬೇಕಾದ ಸಂದರ್ಭ ಬಂದಲ್ಲಿ ಮುನ್ನೆಚ್ಚರಿಕೆ ವಹಿಸಿ.