ಬಹುತೇಕ ನಾನ್ ವೆಜ್ ಪ್ರಿಯರಿಗೆ ಚಿಕನ್ ಖಾದ್ಯಗಳೆಂದರೆ ಇಷ್ಟ. ಸ್ವಾದಿಷ್ಟವಾದ ಮಲಯಾ ಚಿಕನ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಮಧ್ಯಮ ಗಾತ್ರದ ಕೋಳಿ, 2 ಹೆಚ್ಚಿದ ಈರುಳ್ಳಿ, 1 ತುಂಡು ದಾಲ್ಚಿನ್ನಿ, 1 ಟೀ ಸ್ಪೂನ್ ಕರಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, 4 ಕೆಂಪು ಮೆಣಸಿನ ಕಾಯಿ, 1 ತೆಂಗಿನ ಕಾಯಿ ತುರಿದಿದ್ದು, 2 ದೊಡ್ಡ ಟೊಮ್ಯಾಟೊ ಹೆಚ್ಚಿದ್ದು, 4 ಲವಂಗ, 4 ಟೇಬಲ್ ಸ್ಪೂನ್ ಎಣ್ಣೆ, 1 ಬೆಳ್ಳುಳ್ಳಿ, 1 ಟೇಬಲ್ ಸ್ಪೂನ್ ಜೀರಿಗೆ, 1 ತುಂಡು ಶುಂಠಿ ರುಬ್ಬಿಕೊಳ್ಳಲು.
ತಯಾರಿಸುವ ವಿಧಾನ:
ಕೋಳಿಯನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿಕೊಂಡು ಅದಕ್ಕೆ ಉಪ್ಪು, ದಾಲ್ಚಿನ್ನಿ, ಲವಂಗ, ಕರಿಮೆಣಸಿನೊಂದಿಗೆ 2 ಕಪ್ ನೀರಿನಲ್ಲಿ ಬೇಯಿಸಿಕೊಳ್ಳಿ.
ಅದು ಬೆಂದ ಬಳಿಕ ಅದರಲ್ಲಿ ಉಳಿದ ನೀರನ್ನು ಬೇರೆ ತೆಗೆದಿಡಿ. ಒಂದು ಅಗಲವಾದ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾಯಿಸಿಕೊಂಡು, ಈರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಿ.
ಬಳಿಕ ಟೊಮ್ಯಾಟೊ ಹಾಕಿ ಹುರಿಯಿರಿ. ಟೊಮ್ಯಾಟೊ ಗೊಜ್ಜಿನಂತೆ ಆದಾಗ, ಅದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಸೇರಿಸಿ ಹುರಿಯಿರಿ.
ಗಟ್ಟಿಯಾದಂತೆ ಅದರ ನಡುವಿನಲ್ಲಿ ಜಾಗಮಾಡಿ, ಅಲ್ಲಿ ತೆಂಗಿನ ಕಾಯಿ ತುರಿಯನ್ನು ಹಾಕಿ ಕೆಂಪಗೆ ಹುರಿಯಿರಿ. ಬಳಿಕ ಚಿಕನ್ ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ. ಚಿಕನ್ ಬೇಯಿಸಿದ್ದ ನೀರನ್ನು ಅದಕ್ಕೆ ಸೇರಿಸಿ.
5 -6 ನಿಮಿಷ ಬೇಯಿಸಿರಿ. ಮಲಯಾ ಚಿಕನ್ ಅನ್ನು ಬಿಸಿ ಪರೋಟಗಳೊಂದಿಗೆ ತಿನ್ನಲು ಕೊಡಿ.