ದೋಸೆಗಳಲ್ಲಿ ಹಲವಾರು ವಿಧ. ಸಾಮಾನ್ಯವಾಗಿ ಮಸಾಲೆ, ಸೆಟ್, ಪೇಪರ್ ದೋಸೆ ಮೊದಲಾದ ಒಂದಿಷ್ಟು ದೋಸೆಗಳ ರುಚಿಯನ್ನು ಮಾತ್ರ ನೋಡಿರುತ್ತೀರಿ. ವಿಶೇಷವಾಗಿ ಗೆಣಸಿನ ದೋಸೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು :
ದೋಸೆಹಿಟ್ಟು – 1 ಲೀಟರ್, ಬೇಯಿಸಿದ ಗೆಣಸು (ಕಿವುಚಿದ್ದು) – 500 ಗ್ರಾಂ, ಉಪ್ಪು – 3 ಚಮಚ, ಮಸಾಲೆ ಪುಡಿ – 25 ಗ್ರಾಂ, ಖಾರದಪುಡಿ – 3 ಚಮಚ, ಎಣ್ಣೆ – 300 ಗ್ರಾಂ.
ತಯಾರಿಸುವ ವಿಧಾನ :
ಮೇಲೆ ತಿಳಿಸಿದ ಪದಾರ್ಥಗಳನ್ನು ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಕಲೆಸಿರಿ. ಸ್ವಲ್ಪ ಅರಿಶಿಣ, ಅಡುಗೆ ಸೋಡಾವನ್ನು ಹಾಕಿ ಚೆನ್ನಾಗಿ ಕಲೆಸಿರಿ. ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿರಿ. ಸೌಟಿನಿಂದ ಹಿಟ್ಟು ತೆಗೆದು ತೆಳುವಾಗಿ ಅಗಲವಾಗಿ ದೋಸೆಯನ್ನು ಹಾಕಿರಿ.
ಚಮಚದಿಂದ 2 – 3 ಸಲ ಎಣ್ಣೆಯನ್ನು ಹಾಕಿ ದೋಸೆ ಎರಡೂ ಬದಿಯಲ್ಲಿ ಬೆಂದು ಗರಿಗರಿಯಾದ ಬಳಿಕ ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿರಿ. ಕೊಬ್ಬರಿ ಚಟ್ನಿ, ಪಲ್ಯ, ಸಾಗುವಿನೊಂದಿಗೆ ಸೇವಿಸಿರಿ. ದೋಸೆ ಹಿಟ್ಟನ್ನು 1 ದಿನಕ್ಕಿಂತ ಹೆಚ್ಚು ಸಮಯ ಇಡಬಾರದು.