ಸಿಹಿ ತಿನಿಸು ಯಾರಿಗೆ ಇಷ್ಟವಾಗಲ್ಲ ಹೇಳಿ. ಚಿಕ್ಕವರಿಂದ ದೊಡ್ಡವರವರೆಗೂ ಇಷ್ಟವಾಗುವ ರಸಗುಲ್ಲ ಮಾಡುವ ವಿಧಾನ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಲೀಟರ್ ಹಾಲು, 200 ಮಿ. ಲೀಟರ್ ಪನ್ನೀರ್, 2 ನಿಂಬೆ ಹಣ್ಣುಗಳ ರಸ, 1 ಟೀ ಸ್ಪೂನ್ ಸಣ್ಣರವೆ, ಕಲ್ಲು ಸಕ್ಕರೆ ಚೂರುಗಳು, 1 ಕೆ.ಜಿ.ಸಕ್ಕರೆ.
ತಯಾರಿಸುವ ವಿಧಾನ:
ಹಾಲನ್ನು ಚೆನ್ನಾಗಿ ಕಾಯಿಸಿದ ಬಳಿಕ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಿಂಡಿ 1 ನಿಮಿಷದ ನಂತರ ಕೆಳಗೆ ಇಳಿಸಿರಿ. ತೆಳುವಾದ ಬಟ್ಟೆಯಲ್ಲಿ ಒಡೆದ ಹಾಲನ್ನು ಶೋಧಿಸಿ ಗಟ್ಟಿಯಾದ ಹಾಲನ್ನು ಬಟ್ಟೆಯಲ್ಲೇ ಉಳಿಸಿ ಕೊಕ್ಕೆಯಲ್ಲಿ ನೇತು ಹಾಕಿ.
ನೀರಿನಾಂಶ ಇಂಗಿದ ನಂತರ ಕೊನೆಗೆ ಉಳಿಯುವ ಗಟ್ಟಿ ಭಾಗಕ್ಕೆ ಸಣ್ಣ ರವೆಯನ್ನು ಬೆರೆಸಿ ಚೆನ್ನಾಗಿ ಕಲೆಸಿರಿ. 5-6 ನಿಮಿಷಗಳ ಕಾಲ ನಾದಿ ಜಾಮೂನು ಹಿಟ್ಟಿನ ಹದಕ್ಕೆ ಸಿದ್ಧಪಡಿಸಿಕೊಳ್ಳಿರಿ. ನಂತರ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿಕೊಂಡು ಪ್ರತಿಯೊಂದರ ನಡುವೆ ಒಂದು ಕಲ್ಲು ಸಕ್ಕರೆ ಚೂರನ್ನು ಇಡಿ.
ಪಾತ್ರೆಯಲ್ಲಿ ಸಕ್ಕರೆಯ ಎಳೆ ಪಾಕ ಮಾಡಿಕೊಂಡು, ಅದರಲ್ಲಿ ಸ್ವಲ್ಪ ಪ್ರತ್ಯೇಕವಾಗಿ ತೆಗೆದಿಟ್ಟುಕೊಂಡಿರುವ ಪಾಕವನ್ನು ರಸಗುಲ್ಲಗಳ ಮೇಲೆ ಹಾಕಿ ಆಗಾಗ ಸಿಂಪಡಿಸುತ್ತಾ, ಇರಿ. ಸುಮಾರು ಅರ್ಧ ಗಂಟೆ ಸಕ್ಕರೆ ಪಾಕದಲ್ಲಿ ರಸಗುಲ್ಲ ಬೇಯಿಸಿ, ರಸಗುಲ್ಲಗಳು ಉಬ್ಬುತ್ತವೆ. ಆಗ ಅವುಗಳನ್ನು ಕೆಳಗೆ ಇಳಿಸಿ ಅದಕ್ಕೆ ಪನ್ನೀರು ಬೆರೆಸಿ ತಣ್ಣಗಾದ ಮೇಲೆ ತಿನ್ನಲು ಕೊಡಿ.