ಉಪ್ಪಿನಕಾಯಿ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಉಪ್ಪಿನಕಾಯಿ ಇಲ್ಲದಿದ್ರೆ ಊಟ ಕೂಡ ರುಚಿಸುವುದಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಉಪ್ಪಿನಕಾಯಿಗಳನ್ನು ಸವಿಯಲು ನಾವು ಕನಿಷ್ಟ ಒಂದು ವಾರವಾದ್ರೂ ಕಾಯಬೇಕು.
ಉಪ್ಪು, ಖಾರ ಮಸಾಲೆಗಳನ್ನೆಲ್ಲ ಅದು ಹೀರಿಕೊಂಡ ಮೇಲೆ ಸವಿಯಲು ಚೆನ್ನ. ಆದ್ರೆ ಇದು ನಿಂಬೆಹಣ್ಣಿನ ಇನ್ ಸ್ಟಂಟ್ ಉಪ್ಪಿನಕಾಯಿ ಆಗಿರೋದ್ರಿಂದ ಫಟಾ ಫಟ್ ಅಂತಾ ಮಾಡಬಹುದು.
ಬೇಕಾಗುವ ಸಾಮಗ್ರಿ : ಮಾಗಿದ 5 ನಿಂಬೆಹಣ್ಣು, 1 ಕಪ್ ನೀರು, 2 ಚಮಚ ಕೆಂಪು ಮೆಣಸಿನಕಾಯಿ ಪುಡಿ, ಅರ್ಧ ಚಮಚದಷ್ಟು ಅರಿಶಿನ, 1 ಚಮಚ ಸಾಸಿವೆ ಕಾಳಿನ ಪುಡಿ, ಕಾಲು ಚಮಚದಷ್ಟು ಮೆಂತ್ಯ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ನಿಂಬೆರಸ, 3 ಚಮಚ ಸಾಸಿವೆ ಎಣ್ಣೆ, ಒಂದು ಚಮಚ ಸಾಸಿವೆ, ಅರ್ಧ ಚಮಚದಷ್ಟು ಇಂಗು.
ನಿಂಬೆ ಉಪ್ಪಿನಕಾಯಿ ಮಾಡುವ ವಿಧಾನ : ನಿಂಬೆಹಣ್ಣುಗಳನ್ನು ಇಡಿಯಾಗಿಯೇ ಒಂದು ಕಪ್ ನೀರು ಬೆರೆಸಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. 5 ಸೀಟಿ ಆಗುವವರೆಗೆ ಅಥವಾ ನಿಂಬೆ ಹಣ್ಣು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ನಿಂಬೆಹಣ್ಣುಗಳನ್ನು ಬೇಯಿಸುವ ಮೊದಲೇ ಕತ್ತರಿಸಬೇಡಿ, ಕತ್ತರಿಸಿದಲ್ಲಿ ಅದು ಕಹಿಯಾಗುತ್ತದೆ. ಕುಕ್ಕರ್ ತಣ್ಣಗಾದ ಬಳಿಕ ನಿಂಬೆಹಣ್ಣುಗಳನ್ನು ಹೋಳು ಮಾಡಿಕೊಳ್ಳಿ.
ನಂತರ ಅದಕ್ಕೆ ಅಚ್ಚಖಾರದ ಪುಡಿ, ಅರಿಶಿನ, ಸಾಸಿವೆ ಪುಡಿ, ಮೆಂತ್ಯದ ಪುಡಿ ಮತ್ತು ಉಪ್ಪನ್ನು ಬೆರೆಸಿ. ಬಳಿಕ ಅಗತ್ಯಕ್ಕೆ ತಕ್ಕಷ್ಟು ನಿಂಬೆರಸವನ್ನು ಹಾಕಿಕೊಳ್ಳಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕಿಡಿ. ನಂತರ ಸಾಸಿವೆ ಎಣ್ಣೆ, ಸಾಸಿವೆ ಕಾಳು, ಇಂಗು ಹಾಕಿ ವಗ್ಗರಣೆ ಮಾಡಿ, ಸಾಸಿವೆ ಚಟಪಟ ಎಂದ ಬಳಿಕ ಅದನ್ನು ಉಪ್ಪಿನಕಾಯಿಗೆ ಬೆರೆಸಿ. ಇದಾದ ಬಳಿಕ ರುಚಿಯಾದ ನಿಂಬೆ ಉಪ್ಪಿನಕಾಯಿ ರೆಡಿ. ಒಂದು ವಾರದವರೆಗೂ ಈ ಉಪ್ಪಿನಕಾಯಿಯನ್ನು ಬಳಸಬಹುದು.