ಪ್ರತಿ ಬಾರಿ ಮನೆಯಲ್ಲಿ ಚಿಕನ್ ಸಾರು, ಕಬಾಬ್ ಹಾಗೂ ಬಿರಿಯಾನಿ ತಿಂದು ಬೇಜಾರಾಗಿದೆಯೇ? ಚಿಕನ್ನ ಬಗೆ ಬಗೆ ಖಾದ್ಯಗಳನ್ನು ಮನೆಯಲ್ಲೇ ಮಾಡಿ ತಿನ್ನಬಹುದು. ಅದರಲ್ಲಿ ಒಂದು ಚಿಕನ್ ಮಂಚೂರಿ. ಅದರ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಬೋನ್ಲೆಸ್ ಚಿಕನ್ – 1/2 ಕೆ.ಜಿ.
ಎಣ್ಣೆ – ಕರಿಯಲು
ಕಲೆಸಲು ಸಾಮಾಗ್ರಿಗಳು
ಮೈದಾಹಿಟ್ಟು – 5 ಚಮಚ
ಕಾರ್ನ್ ಸ್ಟಾರ್ಚ್ – 3 ಚಮಚ
ಕಾಳುಮೆಣಸಿನ ಪುಡಿ – 1/4 ಚಮಚ
ನೀರು – 1/4 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಸಾಸ್ಗೆ
ಎಣ್ಣೆ – 1 ಟೇಬಲ್ ಚಮಚ
ಈರುಳ್ಳಿ – 1/2 (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 5-6
ಬೆಳ್ಳುಳ್ಳಿ – 4 ರಿಂದ 5 ಎಸಳು
ಟೊಮೆಟೊ ಕೆಚಪ್ – 3 ಚಮಚ
ಕೆಂಪುಮೆಣಸಿನ ಸಾಸ್ – 2 ಚಮಚ
ಸೋಯಾ ಸಾಸ್ – 4 ಟೀ ಚಮಚ
ಬಿಳಿ ವಿನೇಗರ್ – 2 ಟೀ ಚಮಚ
ನೀರು – 6 ಟೇಬಲ್ ಚಮಚ
ಕಾರ್ನ್ ಸ್ಟ್ರ್ಯಾಚ್ – 1 ಟೀ ಚಮಚ
ಸ್ಪ್ರಿಂಗ್ ಆನಿಯನ್ – 2 ದಂಟು
ಮಾಡುವ ವಿಧಾನ
ಮೊದಲು ಮೈದಾಹಿಟ್ಟು, ಕಾರ್ನ್ ಸ್ಟಾರ್ಚ್, ಉಪ್ಪು, ಕಾಳುಮೆಣಸಿನ ಹುಡಿ ಹಾಗೂ ನೀರು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆ ತೆಗೆದಿಡಿ.
ನಂತರ ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ, ಅದಕ್ಕೆ ಕಲೆಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ. ನಂತರ ಎಲ್ಲವನ್ನೂ ಟಿಶ್ಯೂ ಪೇಪರ್ ಮೇಲೆ ಹಾಕಿ ಬದಿಗಿಡಿ.
ನಾನ್ ಸ್ಟಿಕ್ ಪಾನ್ವೊಂದರಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಟೊಮೆಟೊ ಕೆಚಪ್, ಕೆಂಪುಮೆಣಸಿನ ಸಾಸ್ ಸೇರಿಸಿ ಎಣ್ಣೆ ಬಿಡುವವರೆಗೂ ಮಿಕ್ಸ್ ಮಾಡಿ. ಅದಕ್ಕೆ ಸೋಯಾ ಸಾಸ್ ಹಾಗೂ ವಿನೇಗರ್ ಸೇರಿಸಿ ಮತ್ತೆ ಕಲೆಸಿ. ನಂತರ ಕಾರ್ನ್ ಸ್ಟಾರ್ಚ್ ಗೆ ನೀರು ಸೇರಿಸಿ ಅದನ್ನು ಪಾನ್ಗೆ ಸೇರಿಸಿ. ಮಿಶ್ರಣ ದಪ್ಪವಾಗುವವರೆಗೂ ಕಲೆಸುತ್ತೀರಿ. ಈಗ ಕರಿದಿಟ್ಟುಕೊಂಡ ಚಿಕನ್ ತುಂಡುಗಳನ್ನು ಪಾನ್ಗೆ ಸೇರಿಸಿ. ಚಿಕನ್ ಅದರೊಂದಿಗೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲೆಸಿ. ಕೊನೆಯಲ್ಲಿ ಸ್ಪ್ರಿಂಗ್ ಆನಿಯನ್ ಸೇರಿಸಿ ಮತ್ತೆ ಮಿಕ್ಸ್ ಮಾಡಿ. ರೆಡಿಯಾದ ಚಿಕನ್ ಮಂಚೂರಿ, ಫ್ರೈಡ್ ರೈಸ್ ಹಾಗೂ ನೂಡಲ್ಸ್ ಜೊತೆ ತಿನ್ನಲು ಚೆನ್ನಾಗಿರುತ್ತದೆ.