
ಮಾವಿನಕಾಯಿಯಂತೂ ಮಾರುಕಟ್ಟೆಗೆ ಬಂದಾಯ್ತು. ಇನ್ನೇಕೆ ತಡ ಬಗೆ ಬಗೆಯ ಅಡುಗೆ ಮಾಡಿಕೊಂಡು ತಿನ್ನುವುದೇ. ಇಲ್ಲಿ ಮಾವಿನಕಾಯಿ ಬಳಸಿ ರುಚಿಯಾದ ರಸಂ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
1-ಮಾವಿನಕಾಯಿ, 2 –ಹಸಿಮೆಣಸು,2 ಟೀ ಸ್ಪೂನ್-ರಸಂ ಪುಡಿ, ½ ಟೀ ಸ್ಪೂನ್-ಅರಿಶಿನ ಪುಡಿ, 2 ಟೀ ಸ್ಪೂನ್- ಬೆಲ್ಲ,ರುಚಿಗೆ ತಕ್ಕಷ್ಟು-ಉಪ್ಪು, 1 ಟೀ ಸ್ಪೂನ್- ಎಣ್ಣೆ, 5-ಕರಿಬೇವು, ಚಿಟಿಕೆ-ಇಂಗು, ¼ ಟೀ ಸ್ಪೂನ್- ಸಾಸಿವೆ.
ಮಾಡುವ ವಿಧಾನ:
ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲಿನ ಸಿಪ್ಪೆ ತೆಗೆದು ಒಳಗಿರುವ ತಿರುಳನ್ನು ಕತ್ತರಿಸಿಕೊಳ್ಳಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಅದಕ್ಕೆ ಹಸಿಮೆಣಸು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದು ಬೆಂದು ತಣ್ಣಗಾದ ಮೇಲೆ ಚೆನ್ನಾಗಿ ಹಿಸುಕಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಸಾಸಿವೆ ಹಾಕಿ ಇದು ಸಿಡಿದಾಗ ಇಂಗು, ಕರಿಬೇವು ಸೇರಿಸಿ ಇದು ತುಸು ಫ್ರೈ ಆದಾಗ ಅದಕ್ಕೆ ಮಾವಿನಕಾಯಿ ಮಿಶ್ರಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 1 ಕಪ್ ನೀರು ಹಾಕಿ ಅರಿಶಿನ ಪುಡಿ, ಬೆಲ್ಲ, ಉಪ್ಪು, ರಸಂ ಪುಡಿ ಹಾಕಿ ಚೆನ್ನಾಗಿ ಕುದಿಸಿದರೆ ರುಚಿಯಾದ ರಸಂ ಸವಿಯಲು ಸಿದ್ಧ.