ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ.
ಬೇಕಾಗುವ ಸಾಮಾಗ್ರಿ-ಪಾಸ್ತಾ-ಅರ್ಧ ಕಪ್, ಪಾಸ್ತಾ ಕಪ್ 1 ಕಪ್ ನಷ್ಟು, ಕ್ಯಾರೆಟ್, ಬೀನ್ಸ್-1/2 ಕಪ್, ಈರುಳ್ಳಿ-ಕಾಲು ಕಪ್, ಕಾರ್ನ್ ಫ್ಲೋರ್-1 ಚಮಚ, ಟೊಮೆಟೊ ಸಾಸ್ 1 ಕಪ್, ನೆನೆಸಿಟ್ಟುಕೊಂಡ ಬಿಳಿ ಕಡಲೆ-2 ಚಮಚ, ಬೆಳ್ಳುಳ್ಳಿ-5 ಎಸಳು, ನೀರು-1/4 ಕಪ್, ಎಣ್ಣೆ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಕಡಲೆ, ತರಕಾರಿಯನ್ನು ಮೊದಲು ಬೇಯಿಸಿಕೊಳ್ಳಿ.
ನಂತರ ಒಂದು ಬಾಣಲೆಗೆ ನೀರು, ಉಪ್ಪು ಸೇರಿಸಿ ಪಾಸ್ತಾವನ್ನು ಬೇಯಿಸಿಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಮೇಲೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ. ಇದು ಕೆಂಪಗಾದ ನಂತರ ಬೇಯಿಸಿಟ್ಟುಕೊಂಡ ತರಕಾರಿ, ಕಡಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಇದಕ್ಕೆ ಟೊಮೆಟೊ ಸಾಸ್, ಪಾಸ್ತಾ ಸಾಸ್, ಹಾಕಿ ಸಣ್ಣ ಉರಿಯಲ್ಲಿ ನಿಧಾನಕ್ಕೆ ಬೇಯಿಸಿಕೊಳ್ಳಿ. 1 ನಿಮಿಷ ಹುರಿದುಕೊಂಡ ನಂತರ ಇದಕ್ಕೆ ನೀರು ಹಾಕಿ ಅದು ಕುದಿದ ನಂತರ ಬೇಯಿಸಿಟ್ಟುಕೊಂಡ ಪಾಸ್ತಾ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ತದನಂತರ ಕಾರ್ನ್ ಫ್ಲೋರ್ ಹಾಕಿ ಗಂಟಾಗದಂತೆ ಚೆನ್ನಾಗಿ ತಿರುವಿ 5 ನಿಮಿಷ ಬೇಯಿಸಿಕೊಂಡರೆ ಬಿಸಿಬಿಸಿಯಾದ ಪಾಸ್ತಾ ಸೂಪ್ ರೆಡಿ.