ಚಿಕನ್ ಮಸಾಲ ಎಂದರೆ ಮಾಂಸಹಾರ ಪ್ರಿಯರಿಗೆ ತುಂಬಾ ಇಷ್ಟ. ಇಲ್ಲಿ ಸುಲಭವಾಗಿ ಮಾಡುವ ಚಿಕನ್ ಮಸಾಲ ವಿಧಾನವಿದೆ. ಅನ್ನ, ದೋಸೆ, ಚಪಾತಿ ಮಾಡಿದಾಗ ಇದನ್ನು ಮಾಡಿಕೊಂಡು ಸವಿಯಬಹುದು.
ಮೊದಲಿಗೆ ½ ಕೆಜಿ ಚಿಕನ್ ಅನ್ನು ಚೆನ್ನಾಗಿ ತೊಳೆದು ಸ್ವಲ್ಪ ಉಪ್ಪು, ಅರಿಸಿನ ಹಾಕಿ ಇಡಿ. ನಂತರ 2 ಹದ ಗಾತ್ರದ ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಈರುಳ್ಳಿ ಹಾಕಿ ಫ್ರೈ ಮಾಡಿ.
ಈರುಳ್ಳಿ ಕೆಂಪಾಗುತ್ತಲೆ 1 ಟೇಬಲ್ ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ನಂತರ ಚಿಕನ್ ಹಾಕಿ ಸ್ವಲ್ಪ ಉಪ್ಪು ಹಾಕಿ ಮುಚ್ಚಿಡಿ. ಚಿಕನ್ ನೀರು ಬಿಟ್ಟುಕೊಳ್ಳುತ್ತದೆ. ನಂತರ 2 ಹದ ಗಾತ್ರದ ಟೊಮೆಟೊ ಕತ್ತರಿಸಿ ಹಾಕಿ ಚೆನ್ನಾಗಿ ಬೇಯಲು ಬಿಡಿ.
ಇದಕ್ಕೆ 1 ಚಮಚ ಧನಿಯಾ ಪುಡಿ, 1 ಟೀ ಸ್ಪೂನ್ ಗರಂ ಮಸಾಲ, 4 ಟೇಬಲ್ ಸ್ಪೂನ್ ಚಿಕನ್ ಮಸಾಲ, 1 ಟೀ ಸ್ಪೂನ್ ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಲು ಬಿಡಿ. ನಂತರ ¼ ಕಪ್ ನಷ್ಟು ತೆಂಗಿನಕಾಯಿ ತುರಿಯನ್ನು ಮಿಕ್ಸಿಯಲ್ಲಿ ರುಬ್ಬಿ ಇದಕ್ಕೆ ಹಾಕಿ 8 ನಿಮಿಷಗಳ ಕಾಲ ಬೇಯಲು ಬಿಡಿ. ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.