ಹಾಲು ಎಷ್ಟು ಆರೋಗ್ಯದಾಯಕ ಅನ್ನೋದು ನಮಗೆಲ್ಲರಿಗೂ ಗೊತ್ತು. ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೊಟೀನ್‌ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಹಾಲು ಸಂಪೂರ್ಣ ಆಹಾರ. ಹಾಗಂತ ದಿನಕ್ಕೆ ಲೀಟರ್‌ಗಟ್ಟಲೆ ಹಾಲು ಕುಡಿಯುವುದು ಕೂಡ ಸೂಕ್ತವಲ್ಲ. ದಿನಕ್ಕೆ ಎಷ್ಟು ಹಾಲು ಕುಡಿಯಬೇಕು? ಹೆಚ್ಚು ಹಾಲು ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂಬುದು ಅನೇಕರಿಗೆ ತಿಳಿದಿಲ್ಲ.
ದಿನಕ್ಕೆ ಎಷ್ಟು ಹಾಲು ಕುಡಿಯಬೇಕು ಎಂಬುದು ನಮ್ಮ ವಯಸ್ಸು ಮತ್ತು ಇತರ ಆರೋಗ್ಯ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಹಾಲು ಕುಡಿಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಆದರೆ ಮಿತಿಮೀರಿದರೆ ಅದು ಸಹ ಹಾನಿ ಮಾಡುತ್ತದೆ. ತಜ್ಞರ ಪ್ರಕಾರ ಪ್ರತಿದಿನ ಚೀಸ್ ಅಥವಾ ಮೊಸರು ತಿನ್ನುವವರು ಸುಮಾರು 250 ಮಿಲಿಯಷ್ಟು ಹಾಲು ಕುಡಿದರೆ ಸಾಕು.
19 ರಿಂದ 60 ವರ್ಷ ವಯಸ್ಸಿನವರು ದಿನಕ್ಕೆ ಮೂರು ಕಪ್ ಹಾಲು ಕುಡಿಯಬೇಕು. ಗರ್ಭಿಣಿಯರು ಅಥವಾ ಮಗುವಿಗೆ ಹಾಲುಣಿಸುವ ತಾಯಂದಿರು ವೈದ್ಯರ ಮಾರ್ಗದರ್ಶನದಂತೆ ಹಾಲು ಸೇವಿಸಬೇಕು. ಮೂಳೆ ಮುರಿದಿದ್ದರೆ ಅಥವಾ ಪ್ರಸ್ತುತ ಯಾವುದೇ ಮೂಳೆ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ಸಹ ವೈದ್ಯರ ಸಲಹೆ ಪಡೆದೇ ಹಾಲು ಸೇವಿಸಬೇಕು.
ಸಂಶೋಧನೆಗಳ ಪ್ರಕಾರ ಪ್ರತಿದಿನ ಮೂರು ಲೋಟಕ್ಕಿಂತ ಹೆಚ್ಚು ಹಾಲು ಕುಡಿಯುವುದರಿಂದ ಮಹಿಳೆಯರಲ್ಲಿ ಮೂಳೆ ಮುರಿತದ ಅಪಾಯ ಹೆಚ್ಚಾಗುತ್ತದೆ. ಪ್ರತಿದಿನ ಮೂರು ಲೋಟ ಹಾಲು ಕುಡಿಯುವವರಲ್ಲಿ ಮೂಳೆ ಮುರಿತದ ಅಪಾಯವು ಶೇ.16 ರಷ್ಟು ಹೆಚ್ಚಾಗುತ್ತದೆ.
ಹಾಲಿನ ಅತಿಯಾದ ಸೇವನೆಯು ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ, ಏಕೆಂದರೆ ಇದು ಡಿ-ಗ್ಯಾಲಕ್ಟೋಸ್ ಎಂಬ ಸಕ್ಕರೆಯನ್ನು ಹೊಂದಿರುತ್ತದೆ. ಇದು ಹಾಲಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆ, ಲ್ಯಾಕ್ಟೋಸ್‌ನಲ್ಲಿ ಕಂಡುಬರುವ ಸಂಯುಕ್ತವಾಗಿದೆ. ಲ್ಯಾಕ್ಟೋಸ್ ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಕಡಿಮೆ ದರ್ಜೆಯ ದೀರ್ಘಕಾಲದ ಉರಿಯೂತಕ್ಕೆ ಸಹಾಯ ಮಾಡುತ್ತದೆ. ಉರಿಯೂತವು ದೇಹದ ಮೇಲೆ ಅನೇಕ ವಿಧಗಳಲ್ಲಿ ಹಾನಿಯನ್ನುಂಟುಮಾಡುತ್ತದೆ.
ಡೈರಿ ವಸ್ತುಗಳು, ಪ್ರಾಣಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಸೇವನೆ ಅಧಿಕವಾಗಿರುವ ದೇಶಗಳಲ್ಲಿ ವೃದ್ಧರು ಆಸ್ಟಿಯೊಪೊರೋಸಿಸ್‌ನಿಂದಾಗಿ ಮೂಳೆ ಮುರಿತದ ಅಪಾಯ ಎದುರಿಸುತ್ತಿದ್ದಾರೆ. ಪೂರ್ಣ ಕೆನೆ ಇರುವ ಹಸುವಿನ ಹಾಲು ಮತ್ತು ಚೀಸ್ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಹೆಚ್ಚಿಸುತ್ತದೆ. ಸ್ಯಾಚುರೇಟೆಡ್ ಕೊಬ್ಬು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು ಮತ್ತು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು.