ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಪ್ಲಾಸ್ಮಾವನ್ನು ಬಳಸಿ ಕೋವಿಡ್ ನೊಂದಿಗೆ ಸೆಣಸುತ್ತಿರುವವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ.
ಈ ರೀತಿ ಪ್ಲಾಸ್ಮಾ ದಾನ ಮಾಡಲು ಅವಕಾಶ ಇರುವುದನ್ನು ಬಳಸಿಕೊಂಡ ದೆಹಲಿಯ 28 ವರ್ಷದ ಯೋಗೇಶ್ ಎಂಬ ನರ್ಸಿಂಗ್ ಅಧಿಕಾರಿ ಗಮನ ಸೆಳೆದಿದ್ದಾರೆ.
ಕೊರೊನಾ ಸೋಂಕಿಗೆ ಒಳಗಾಗಿದ್ದ ಅವರು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ 21 ದಿನ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಈಗಾಗಲೆ 3 ಬಾರಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಜತೆಗೆ ಇನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ಲಾಸ್ಮಾ ದಾನ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.
ಪ್ಲಾಸ್ಮಾ ದಾನ ಮಾಡುವುದು ಸಂಪೂರ್ಣ ಸುರಕ್ಷಿತ ಪ್ರಕ್ರಿಯೆ. ಇಡೀ ಪ್ರಕ್ರಿಯೆಯಲ್ಲಿ ಒಂದು ಸೂಜಿ ಮತ್ತು ಕಿಟ್ಟನ್ನು ಮಾತ್ರ ಬಳಸಲಾಗುತ್ತದೆ. ಶೇ.96 ದಾನಿಗಳಿಗೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ. ಕೆಲವರಿಗೆ ತಲೆತಿರುಗುವಿಕೆ, ವಾಕರಿಕೆ ಬರಬಹುದು. ಆದರೆ ತಾತ್ಕಾಲಿಕ ಪರಿಣಾಮ ಎಂದು ವೈದ್ಯರಾದ ಸಂಗೀತಾ ಪಾಠಕ್ ವಿವರಿಸಿದ್ದಾರೆ.
ಆರ್ ಎಂ ಎಲ್ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ತಾವು ಕರ್ತವ್ಯದಲ್ಲಿದ್ದ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅಸಡ್ಡೆ ತೋರಿದ್ದರಿಂದ ಕೊರೋನಾ ಅಂಟಿತು. ಚಿಕಿತ್ಸೆ ಸಂದರ್ಭದಲ್ಲಿ ವ್ಯಾಯಾಮ, ಧ್ಯಾನ, ಡಯಟ್ ನಲ್ಲಿ ಇದ್ದೆ ಎಂದು ಪ್ಲಾಸ್ಮಾ ದಾನಿ ಯೋಗೇಶ್ ಹೇಳಿಕೊಂಡಿದ್ದಾರೆ.