ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಹಾಗೆ ವೈರಸ್ ಕೂಡ ರೂಪಾಂತರಗೊಳ್ಳುತ್ತಿದೆ. ವೈರಸ್ ಹೇಗೆ ಹರಡುತ್ತೆ ಎನ್ನುವ ಬಗ್ಗೆ ಇನ್ನೂ ಅನೇಕ ಗೊಂದಲಗಳಿವೆ. ಸೋಂಕಿತ ಸೀನಿದಾಗ, ಕೆಮ್ಮಿದಾಗ ಪಕ್ಕದವರಿಗೆ ಮೂಗು, ಕಣ್ಣು ಹಾಗೂ ಬಾಯಿ ಮೂಲಕ ವೈರಸ್ ದೇಹವನ್ನು ಸೇರುತ್ತದೆ. ಗಾಳಿಯ ಮೂಲಕ ವೈರಸ್ ಹರಡುತ್ತಿದೆ ಎಂದು ಇತ್ತೀಚಿಗೆ ನಡೆದ ಸಂಶೋಧನೆ ಹೇಳಿದೆ. ಸೋಂಕಿತರ ನೇರ ಸಂಪರ್ಕಕ್ಕೆ ಬರದೆ ಹೋದ್ರೂ, ಸಣ್ಣ ಕೊಠಡಿಯಲ್ಲಿ, ಎಸಿ ಕ್ಯಾಬ್, ಬಸ್, ಶಾಪಿಂಗ್ ಮಾಲ್, ಚಿತ್ರಮಂದಿರ ಸೇರಿದಂತೆ ಮುಚ್ಚಿದ ಹವಾನಿಯಂತ್ರಿತ ಪರಿಸರದಲ್ಲಿ ಅಡಗಿರುವ ವೈರಸ್ ವ್ಯಕ್ತಿ ಮೇಲೆ ದಾಳಿ ಮಾಡುತ್ತದೆ ಎನ್ನಲಾಗಿದೆ.
ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊರೊನಾ ಹರಡದಂತೆ ತಡೆಯಬಹುದು. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರು ಸಾಧ್ಯವಾದಷ್ಟು ಮನೆಯಲ್ಲಿರಿ. ಅದರಲ್ಲೂ ಬಿಪಿ, ಡಯಾಬಿಟಿಸ್ ಸೇರಿದಂತೆ ದೀರ್ಘ ಖಾಯಿಲೆಯಿಂದ ಬಳಲುತ್ತಿರುವವರು ಮನೆಯಿಂದ ಹೊರಗೆ ಹೋಗಬೇಡಿ. ಹಾಗೆ ಮನೆಗೆ ಸಂಬಂಧಿಕರು, ಸ್ನೇಹಿತರನ್ನು ಆಹ್ವಾನಿಸಬೇಡಿ.
ಸೋಪ್ ಹಾಗೂ ನೀರಿನಿಂದ ಆಗಾಗ ಕೈ ಹಾಗೂ ಮುಖವನ್ನು ತೊಳೆಯುತ್ತಿರಿ.
ಮನೆಯಿಂದ ಹೊರ ಬೀಳುವ ಸಂದರ್ಭದಲ್ಲಿ ಅಗತ್ಯವಾಗಿ ಮಾಸ್ಕ್ ಧರಿಸಿ.
ಯಾವುದೇ ವ್ಯಕ್ತಿ ಮಧ್ಯೆ 6 ಅಡಿ ಅಂತರವನ್ನು ಕಾಯ್ದುಕೊಳ್ಳಿ. ಸಾಮಾಜಿಕ ಅಂತರ ಕೊರೊನಾ ನಿಯಂತ್ರಣಕ್ಕೆ ಬಹಳ ಮುಖ್ಯ.
ಹವಾನಿಯಂತ್ರಿತ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿ. ಮಾಲ್, ಕಚೇರಿ ಸೇರಿದಂತೆ ತಾಜಾ ಗಾಳಿ ಸಿಗದ ಪ್ರದೇಶದಲ್ಲಿ ತುಂಬಾ ಸಮಯ ಇರಬೇಡಿ.
ಸಮತೋಲಿತ ಆಹಾರವನ್ನು ಸೇವನೆ ಮಾಡಿ. ದ್ರವ ಆಹಾರ ಸೇವನೆ ಹೆಚ್ಚಿರಲಿ. ತಾಜಾ ಹಣ್ಣಿನ ರಸ, ತರಕಾರಿ, ಗಿಡಮೂಲಿಕೆ ಪಾನೀಯ, ಅರಿಶಿನದ ಹಾಲಿನ ಸೇವನೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ.
ಅನಾರೋಗ್ಯರ ಬಳಿ ಹೋಗುವುದನ್ನು ತಪ್ಪಿಸಿ. ಅಗತ್ಯವೆನಿಸಿದ್ರೆ ವೈದ್ಯರ ಸಲಹೆಯನ್ನು ಪಡೆಯಿರಿ.