ಅಲ್ಲಲ್ಲಿ ಇಟ್ಟಿರುವ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ನೆಪ ಮಾತ್ರಕ್ಕೆ ಮುಟ್ಟಿ ಹೋಗುವುದರಿಂದಲೂ ನಿಮಗೆ ಕೊರೊನಾ ಬರಬಹುದು. ಮೊದಲು ಸ್ಯಾನಿಟೈಸರ್ ಸರಿಯಾಗಿ ಬಳಸುವ ವಿಧಾನ ತಿಳಿಯೋಣ.
ಕನಿಷ್ಠ ಏನಿಲ್ಲವೆಂದರೂ ಮುಂದಿನ ಒಂದೆರಡು ವರ್ಷಗಳ ತನಕ ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆ ಕಡ್ಡಾಯವಾಗುವುದು ಖಚಿತ. ಹಾಗಾಗಿ ಸ್ಯಾನಿಟೈಸರ್ ಅನ್ನು ಸರಿಯಾದ ರೀತಿಯಲ್ಲಿ ಬಳಸುವುದನ್ನು ತಿಳಿಯುವುದು ಬಹಳ ಮುಖ್ಯ.
ಶೇ.60 ರಿಂದ 70ರಷ್ಟು ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ನಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ಗಳನ್ನು ನಾಶ ಮಾಡುವ ಶಕ್ತಿ ಇದೆ. ಕೈ ತೊಳೆಯಲು ನೀರು ಇಲ್ಲದಾಗ ಇದನ್ನು ಬಳಸಬಹುದು.
ಸ್ಯಾನಿಟೈಸರ್ ಅನ್ನು ಕೈಗೆ ಹಾಕಿಕೊಂಡ ಬಳಿಕ ಕನಿಷ್ಠ 15ರಿಂದ 30 ಸೆಕೆಂಡುಗಳ ಕಾಲ ಕೈ ಉಜ್ಜಲೇಬೇಕು. ಆಗ ಮಾತ್ರ ವೈರಸ್ ಗಳು ಸಾಯುತ್ತವೆ. ಸ್ಯಾನಿಟೈಸರ್ ಹಚ್ಚಿ ಸರಿಯಾಗಿ ಕೈ ತೊಳೆಯದೇ ಊಟ ಅಥವಾ ತಿನಿಸು ಸೇವಿಸುವುದು ಒಳ್ಳೆಯದಲ್ಲ.
ಮಕ್ಕಳಿಂದ ಸ್ಯಾನಿಟೈಸರ್ ಗಳನ್ನು ಸಾಧ್ಯವಾದಷ್ಟು ದೂರವಿಡಿ. ಇದು ಹೊಟ್ಟೆಗೆ ಹೋದರೆ ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳೇನಾದರೂ ಕುಡಿದಿದ್ದರೆ ತಕ್ಷಣ ವೈದ್ಯರ ಬಳಿ ಕರೆದೊಯ್ಯಿರಿ.
6 ವರ್ಷದೊಳಗಿನ ಮಕ್ಕಳ ಕೈಗೆ ಸ್ಯಾನಿಟೈಸರ್ ಕೊಡದಿರಿ. ಚರ್ಮರೋಗದಿಂದ ಬಳಲುವವರೂ ಸ್ಯಾನಿಟೈಸರ್ ನಿಂದ ದೂರ ಇರುವುದೇ ಒಳ್ಳೆಯದು. ಸ್ಯಾನಿಟೈಸರ್ ಹಚ್ಚಿಕೊಂಡ ಬಳಿಕ ಕೈಗೆ ಮಾಯಿಸ್ಚರೈಸರ್ ಕ್ರೀಮ್ ಹಚ್ಚಿಕೊಳ್ಳಿ. ಇದರಿಂದ ತ್ವಚೆ ಒಣಗಿದಂತಾಗುವುದನ್ನು ತಪ್ಪಿಸಬಹುದು.