ಮನೆಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು, ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಗಂಟೆಗಟ್ಟಲೆ ಕುಳಿತು ಕೊಳ್ಳುತ್ತಾರೆ.
ಅಂತಹವರು ಈ ಬಾರಿ ಅವುಗಳ ಮುಂದೆ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಬದಲು ವ್ಯಾಯಾಮಕ್ಕಾಗಿ ಉಪಯೋಗಿಸುವ ದೊಡ್ಡ ಬಾಲ್ ತೆಗೆದುಕೊಂಡು ಅದರ ಮೇಲೆ ಕುಳಿತುಕೊಳ್ಳಿ. ಅದರ ಮೇಲೆ ಕುಳಿತರೆ ಎಷ್ಟೋ ಪ್ರಯೋಜನಗಳಿವೆ.
* ರಬ್ಬರ್ ಬಾಲಿನ ಮೇಲೆ ಕುಳಿತುಕೊಳ್ಳುವುದರಿಂದ ಶರೀರ ನೇರವಾಗಿರುತ್ತದೆ. ಇದರಿಂದ ಬೆನ್ನೆಲುಬಿನ ಮೇಲೆ ಒತ್ತಡ ಬೀಳುವುದಿಲ್ಲ.
ಸೊಂಟನೋವು, ಬೆನ್ನುನೋವು ಕಾಡುವುದಿಲ್ಲ. ಇಂತಹ ಸಮಯದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವಾಗ ಬಾಲ್ ಮೇಲೆ ಕುಳಿತು ಕೊಂಡರೆ ಒಳ್ಳೆಯದು.
* ಈ ಬಾಲ್ ಮೇಲೆ ಕುಳಿತು ಕೆಲಸ ಮಾಡುವಾಗ ಶರೀರವನ್ನು ಬಾಲ್ ಅನ್ನು ಸಮನ್ವಯ ಮಾಡಿಕೊಂಡು ಅತ್ತ ಇತ್ತ ಕದಲಬಹುದು. ಇದರಿಂದ ಕ್ಯಾಲೋರಿಗಳು ಖರ್ಚಾಗುತ್ತವೆ. ಹಾಗಾಗಿ ಗಂಟೆಗಟ್ಟಲೆ ಇವುಗಳ ಮೇಲೆ ಕುಳಿತರೂ ಏನೂ ಯೋಚನೆ ಇಲ್ಲ.
* ಮಾಮೂಲು ಕುರ್ಚಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ರಕ್ತ ಪರಿಚಲನೆ ಸರಿಯಾಗಿ ಇರುವುದಿಲ್ಲ. ಅದೇ ರಬ್ಬರ್ ಬಾಲ್ ಮೆತ್ತಗೆ ಇರುವುದರಿಂದ ಒತ್ತಡ ಇರುವುದಿಲ್ಲ. ಹಾಗಾಗಿ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.
* ಕೆಲಸ ಮಾಡುತ್ತಿರುವಾಗ ನಡು ನಡುವೆ ವಿಶ್ರಾಂತಿ ತೆಗೆದುಕೊಳ್ಳುತ್ತ ಬಾಲಿನ ಮೇಲೆ ಅತ್ತ ಇತ್ತ ತಿರುಗುತ್ತಾ ವರ್ಕೌಟ್ ಮಾಡುವ ಅವಕಾಶವಿರುತ್ತದೆ. ಅದೂ ಅಲ್ಲದೆ ಇರುವ ಸ್ಥಳದಿಂದ ಕದಲಬೇಕಾದ ಅವಶ್ಯಕತೆ ಇಲ್ಲ. ಇದರಿಂದ ಒತ್ತಡ ದೂರವಾಗುತ್ತದೆ. ಕೆಲಸದ ಮೇಲೆ ಏಕಾಗ್ರತೆ ಬೆಳೆಯುತ್ತದೆ. ಜೊತೆಗೆ ವ್ಯಾಯಾಮ ಮಾಡಿದ ಹಾಗೂ ಆಗುತ್ತದೆ.