ಭಾರತದಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅದ್ರ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ. ಕೊರೊನಾಕ್ಕೆ ಇನ್ನೂ ಲಸಿಕೆ ಬಂದಿಲ್ಲ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾಗೆ ಮನೆ ಮದ್ದುಗಳನ್ನು ಹೇಳಲಾಗ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಪಾಂಡಿಚೇರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕೊರೊನಾಕ್ಕೆ ಮದ್ದು ಕಂಡು ಹಿಡಿದಿದ್ದಾನೆ ಎಂಬ ಸುದ್ದಿಯಿದು. 2 ಚಮಚ ಜೇನುತುಪ್ಪ ಮತ್ತು ಕೆಲವು ಶುಂಠಿ ರಸವನ್ನು 1 ಚಮಚ ಕರಿಮೆಣಸಿನ ಪುಡಿಯೊಂದಿಗೆ ಸತತ 5 ದಿನಗಳವರೆಗೆ ಸೇವಿಸುತ್ತ ಬಂದ್ರೆ ಕೊರೊನಾ ಪ್ರಭಾವ ಕಡಿಮೆಯಾಗುತ್ತದೆ ಎಂದು ಬರೆಯಲಾಗಿದೆ.
ಇಡೀ ವಿಶ್ವವು ಈ ಪರಿಹಾರವನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಅಂತಿಮವಾಗಿ 2020 ರಲ್ಲಿ ಒಂದು ಒಳ್ಳೆಯ ಸುದ್ದಿ !! ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಎಲ್ಲ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂದು ಪೋಸ್ಟ್ ಹಾಕಲಾಗಿದೆ. ಆದ್ರೆ ಇದು ಸುಳ್ಳು ಸುದ್ದಿ ಎನ್ನಲಾಗ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಗೂಗಲ್ ನಲ್ಲಿ ಕೂಡ ಪಾಂಡಿಚೇರಿ ವಿದ್ಯಾರ್ಥಿ ಬಗ್ಗೆ ಯಾವುದೇ ಸುದ್ದಿಯಿಲ್ಲ.
ಜೇನುತುಪ್ಪ, ಕರಿಮೆಣಸು ಮತ್ತು ಶುಂಠಿಯನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿದ್ದರೂ, ಅವು COVID-19 ಅನ್ನು ಗುಣಪಡಿಸುತ್ತವೆ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆಗಳಿಲ್ಲ.