ನವಜಾತ ಶಿಶುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ತಾಯಿ ಹಾಲು ಅತ್ಯಗತ್ಯ. ಆರು ತಿಂಗಳವರೆಗೆ ತಾಯಿ ಹಾಲು ಬಿಟ್ಟು ಬೇರೆ ಯಾವುದೇ ಆಹಾರ ನೀಡಬಾರದೆಂದು ವೈದ್ಯರು ಸಲಹೆ ನೀಡುತ್ತಾರೆ. ಅನೇಕ ಮಕ್ಕಳಿಗೆ ತಾಯಿ ಹಾಲು ಕುಡಿಯುವ ಭಾಗ್ಯವಿರುವುದಿಲ್ಲ. ವಿಜ್ಞಾನಿಗಳು ಈಗ ಈ ಕೊರತೆ ನೀಗಿಸಲು ಮುಂದಾಗಿದ್ದಾರೆ. ಲ್ಯಾಬ್ ನಲ್ಲಿ ತಾಯಿ ಹಾಲು ತಯಾರಿಸುವ ವಿಧಾನವನ್ನು ಕಂಡು ಹಿಡಿದಿದ್ದಾರೆ.
ಬಯೋಮಿಲ್ಕ್ ಹೆಸರಿನ ಸ್ಟಾರ್ಟ್ ಅಪ್ ಮಹಿಳೆಯರ ಸ್ತನ ಕೋಶಗಳಿಂದ ಹಾಲು ತಯಾರಿಸುವಲ್ಲಿ ಯಶಸ್ವಿಯಾಗಿದೆ. ಈ ಕಂಪನಿಯಲ್ಲಿ ಬಹುತೇಕ ಮಹಿಳೆಯರಿದ್ದಾರೆ. ತಾಯಿ ಹಾಲಿನಲ್ಲಿರುವ ಎಲ್ಲ ಪೌಷ್ಠಿಕಾಂಶಗಳು ಇದ್ರಲ್ಲಿದೆ ಎಂದು ಕಂಪನಿ ಹೇಳಿದೆ.
ಮ್ಯಾಕ್ರೋನ್ಯೂಟ್ರಿಯೆಂಟ್ ಪ್ರೊಫೈಲ್ ಪ್ರಕಾರ, ಇದರಲ್ಲಿ ಎದೆ ಹಾಲಿನಲ್ಲಿರುವಂತೆ ಎಲ್ಲಾ ರೀತಿಯ ಪ್ರೋಟೀನ್ ಗಳು, ಕಾರ್ಬೋಹೈಡ್ರೇಟ್ ಗಳು, ಕೊಬ್ಬಿನಾಮ್ಲಗಳು ಮತ್ತು ಬಯೋಆಕ್ಟಿವ್ ಲಿಪಿಡ್ ಗಳಿವೆ. ಎರಡೂ ಹಾಲುಗಳಲ್ಲಿ ಪ್ರತಿಕಾಯಗಳ ವ್ಯತ್ಯಾಸವಿದೆ. ಪ್ರತಿಕಾಯವನ್ನು ಹೊರತುಪಡಿಸಿ ಮತ್ತೆಲ್ಲ ಪೌಷ್ಠಿಕಾಂಶಗಳು ಈ ಹಾಲಿನಲ್ಲಿದೆ.
ಇದು ರೋಗನಿರೋಧಕ ಶಕ್ತಿ ಹೆಚ್ಚಳ, ಕರುಳಿನ ಪಕ್ವತೆ, ಸೂಕ್ಷ್ಮಜೀವಿಯ ಸಂಖ್ಯೆ ಮತ್ತು ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಸಿಇಒ ಹೇಳಿದ್ದಾರೆ.