ಕೆಮ್ಮು, ಶೀತ, ಜ್ವರ ಕಾಣಿಸಿಕೊಳ್ತಿದ್ದಂತೆ ಜನರು ಕೊರೊನಾ ಎಂಬ ಭಯಕ್ಕೆ ಒಳಗಾಗ್ತಿದ್ದಾರೆ. ಆದ್ರೆ ಬದಲಾಗ್ತಿರುವ ಹವಾಮಾನದಲ್ಲಿ ಸೊಳ್ಳೆಗಳು ಡೆಂಗ್ಯೂ ಜ್ವರಕ್ಕೆ ಕಾರಣವಾಗ್ತಿವೆ. ಕೊರೊನಾ ಜೊತೆ ಡೆಂಗ್ಯೂ ಹರಡುವಿಕೆ ಹೆಚ್ಚಾಗಿದೆ. ಡೆಂಗ್ಯೂ ಒಂದು ರೀತಿಯ ಜ್ವರವಾಗಿದ್ದು, ಇದು ಸೊಳ್ಳೆಯಿಂದ ಬರುತ್ತದೆ. ಹೆಣ್ಣು ಸೊಳ್ಳೆಯ ಕಡಿತದಿಂದ ಈ ರೋಗ ಉಂಟಾಗುತ್ತದೆ.
ವರದಿಯ ಪ್ರಕಾರ, 2015 ಮತ್ತು 2019 ರ ನಡುವೆ ಭಾರತದಲ್ಲಿ ಸುಮಾರು ಆರೂವರೆ ಲಕ್ಷ ರೋಗಿಗಳು ಇದರ ಪ್ರಭಾವಕ್ಕೆ ಒಳಗಾಗಿದ್ದಾರೆ. ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳ ವರದಿಯಾಗ್ತಿದೆ.
ಭಾರತ, ಚೀನಾ, ಆಫ್ರಿಕಾ, ತೈವಾನ್ ಮತ್ತು ಮೆಕ್ಸಿಕೊ ಸೇರಿದಂತೆ ಸುಮಾರು 3 ಬಿಲಿಯನ್ ಜನರು ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ 2019 ರಲ್ಲಿ ಕೇವಲ 67,000 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆದರೆ 2017 ರಲ್ಲಿ 1.88 ಲಕ್ಷ ಜನರು ಡೆಂಗ್ಯೂ ಪೀಡಿತರಾಗಿದ್ದು, ಈ ಪೈಕಿ 325 ಜನರು ಪ್ರಾಣ ಕಳೆದುಕೊಂಡಿದ್ದರು.
ಈಡೆಸ್ ಸೊಳ್ಳೆ ಕಚ್ಚುವುದ್ರಿಂದ ಡೆಂಗ್ಯೂ ಉಂಟಾಗುತ್ತದೆ. ಈ ವೈರಸ್‌ಗಳು 10 ದಿನಗಳಿಗಿಂತ ಹೆಚ್ಚು ಕಾಲ ಬದುಕುವುದಿಲ್ಲವಾದರೂ, ನಿರ್ಲಕ್ಷ್ಯ ಮಾಡಿದ್ರೆ ಡೆಂಗ್ಯೂ ಹೆಮರಾಜಿಕ್ ಜ್ವರ ಅಥವಾ ಡಿಎಚ್‌ಎಫ್ ರೂಪಕ್ಕೆ ಬದಲಾಗಬಹುದು. ಭಾರೀ ರಕ್ತಸ್ರಾವ, ರಕ್ತದೊತ್ತಡ ಮತ್ತು ಅಂತಿಮವಾಗಿ ಸಾವಿಗೆ ಕಾರಣವಾಗಬಹುದು.
ಡೆಂಗ್ಯೂ ರೋಗಲಕ್ಷಣಗಳು : ಸೋಂಕಿಗೆ ಒಳಗಾದಾಗ ಅದರ ಲಕ್ಷಣಗಳು 4 ರಿಂದ 5 ದಿನಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹೆಚ್ಚಿನ ಜ್ವರ, ತಲೆನೋವು, ಸ್ನಾಯುಗಳು, ಮೂಳೆಗಳು ಮತ್ತು ಕೀಲುಗಳಲ್ಲಿನ ನೋವು, ವಾಂತಿ, ವಾಕರಿಕೆ, ಕಣ್ಣುಗಳಲ್ಲಿ ನೋವು, ಚರ್ಮದ ದದ್ದು ಇತ್ಯಾದಿ ಸೌಮ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರವಾದಾಗ ಹೊಟ್ಟೆ ನೋವು, ನಿರಂತರ ವಾಂತಿ, ಒಸಡುಗಳು ಅಥವಾ ಮೂಗಿನಿಂದ ರಕ್ತಸ್ರಾವ, ಮೂತ್ರದಲ್ಲಿ ರಕ್ತಸ್ರಾವ, ಅತಿಸಾರ, ವಾಂತಿ, ಉಸಿರಾಟದ ತೊಂದರೆ, ದಣಿವು, ಕಿರಿಕಿರಿ ಅಥವಾ ಚಡಪಡಿಕೆ ಕಾಣಿಸಿಕೊಳ್ಳುತ್ತದೆ.
ಈ ರೋಗಲಕ್ಷಣ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಭೇಟಿಯಾಗಿ. ರಕ್ತ ಕಣದ ಎಣಿಕೆ ಪರೀಕ್ಷೆಯನ್ನು ಪೂರ್ಣಗೊಳಿಸಿ. ಇದು ದೇಹದಲ್ಲಿನ ಪ್ಲೇಟ್‌ಲೆಟ್‌ಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ವೈದ್ಯರು ಈ ಆಧಾರದ ಮೇಲೆ ನಿಮಗೆ ಚಿಕಿತ್ಸೆ ನೀಡುತ್ತಾರೆ. ಡೆಂಗ್ಯೂ ಎನ್ಎಸ್ 1 ಎಜಿಗೆ ಎಲಿಸಾ ಪರೀಕ್ಷೆಯನ್ನು ಮಾಡಿ.
ಈ ರಕ್ತ ಪರೀಕ್ಷೆಯು ಡೆಂಗ್ಯೂ ವೈರಸ್ ಪ್ರತಿಜನಕವನ್ನು ಬಹಿರಂಗಪಡಿಸುತ್ತದೆ. ಪಿಸಿಆರ್ ಪರೀಕ್ಷೆಯನ್ನು ಮಾಡಿ. ಇದನ್ನು ಆರಂಭಿಕ ಹಂತದಲ್ಲಿ ಮಾಡಬಹುದು. ಸೆರಾಮ್ ಐಜಿಜಿ ಮತ್ತು ಐಜಿಎಂ ಪರೀಕ್ಷೆಯು ದೇಹದಲ್ಲಿನ ಪ್ರತಿಕಾಯಗಳ ಉತ್ಪಾದನೆಯ ಮಟ್ಟದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
ನೀರನ್ನು ಹೆಚ್ಚಾಗಿ ಸೇವನೆ ಮಾಡಿ. ಸೂಪ್, ಕಷಾಯ, ಎಳೆನೀರು, ದಾಳಿಂಬೆ ಇತ್ಯಾದಿಗಳನ್ನು ಹೆಚ್ಚು ಸೇವಿಸಿ. ಖಿಚ್ಡಿ ಮತ್ತು ಓಟ್ ಮೀಲ್ ಸೇವನೆ ಮಾಡಿ.
ಮನೆಯ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ನೀರು ಸಂಗ್ರಹವಾದ ಜಾಗದಲ್ಲಿ ಸೊಳ್ಳೆ ಮೊಟ್ಟೆಯಿಡುತ್ತದೆ . ಹಾಗಾಗಿ ಸಂಗ್ರಹಿಸಿಟ್ಟ ನೀರನ್ನು ಬದಲಿಸುತ್ತಿರಿ. ಮಲಗುವ ವೇಳೆ ಸೊಳ್ಳೆ ಪರದೆಯನ್ನು ಬಳಸಿ.