ಉಪ್ಪಿನಕಾಯಿ ಇಲ್ಲದಿದ್ರೆ ಊಟವೇ ಸಪ್ಪೆ ಎನಿಸಿಬಿಡುತ್ತದೆ. ಭಾರತದಲ್ಲಿ ಬಹುತೇಕ ಎಲ್ಲರೂ ಉಪ್ಪಿನಕಾಯಿಯನ್ನು ಬಳಸ್ತಾರೆ. ನಿಂಬೆ ಉಪ್ಪಿನಕಾಯಿ, ಮಾವಿನಕಾಯಿ ಉಪ್ಪಿನಕಾಯಿ, ಎಲೆಕೋಸು ಉಪ್ಪಿನಕಾಯಿ ಮತ್ತು ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಹೀಗೆ ಸಾಕಷ್ಟು ವೆರೈಟಿಗಳಿವೆ.
ಚಳಿಗಾಲದಲ್ಲಿ ಕ್ಯಾರೆಟ್ ಉಪ್ಪಿನಕಾಯಿ ಸೇವನೆ ಬಹಳ ಸೂಕ್ತ. ಚಳಿಗಾಲದಲ್ಲಿ ತಾಜಾ ಕ್ಯಾರೆಟ್ ಅಗ್ಗವಾಗಿ ದೊರೆಯುತ್ತದೆ. ಹಾಗಾಗಿ ಕ್ಯಾರೆಟ್ ಉಪ್ಪಿನಕಾಯಿಯನ್ನು ಟ್ರೈ ಮಾಡಿ. ನೀವು ಮಸಾಲೆಯುಕ್ತ ಮತ್ತು ಕಟುವಾದ ಆಹಾರವನ್ನು ಬಯಸಿದರೆ, ಕ್ಯಾರೆಟ್ ಉಪ್ಪಿನಕಾಯಿ ಉತ್ತಮ ಆಯ್ಕೆಯಾಗಿದೆ. ಈ ಉಪ್ಪಿನಕಾಯಿ ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಕ್ಯಾರೆಟ್ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿ: ಕ್ಯಾರೆಟ್ 3, ಮೂಲಂಗಿ 1, ಹಸಿರು ಮೆಣಸಿನಕಾಯಿ 5, 2 ಟೀಸ್ಪೂನ್ ಸಾಸಿವೆ, 1 ಚಮಚ ಜೀರಿಗೆ, 1 ಚಮಚ ಮೆಂತ್ಯ, ಕಾಳುಮೆಣಸು 1 ಟೀಸ್ಪೂನ್, ಸಾಸಿವೆ ಎಣ್ಣೆ 1 ಕಪ್, 1 ಚಮಚ ಸೋಂಪು, 1 ಚಮಚ ಕೆಂಪು ಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು, ಓಮ 1 ಚಮಚ, ಡ್ರೈ ಮಾವಿನ ಪುಡಿ 1 ಚಮಚ.
ತಯಾರಿಸುವ ವಿಧಾನ: ಮೊದಲು ಸಿಪ್ಪೆ ತೆಗೆದು ಕ್ಯಾರೆಟ್, ಮೂಲಂಗಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೊಳೆಯಿರಿ. ಎಲ್ಲವನ್ನೂ ತೆಳುವಾದ ತುಂಡುಗಳಾಗಿ ಕತ್ತರಿಸಿ ಒಣಗಲು ಬಿಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿಮಾಡಿಕೊಳ್ಳಿ. ಅದಕ್ಕೆ ಹಸಿಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಬಯಸಿದರೆ ಕ್ಯಾರೆಟ್ ಮತ್ತು ಮೂಲಂಗಿಯನ್ನು ಸಹ ಫ್ರೈ ಮಾಡಬಹುದು. ನಂತರ ಉಪ್ಪಿನಕಾಯಿ ಮಸಾಲಾ ಮಾಡಲು, ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟುಕೊಂಡು ಬಿಸಿ ಮಾಡಿ.
ಸಾಸಿವೆ, ಜೀರಿಗೆ, ಮೆಂತ್ಯ, ಕಾಳುಮೆಣಸು, ಮೆಂತ್ಯವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನೆಲ್ಲ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಹುರಿದ ಕ್ಯಾರೆಟ್, ಹಸಿರು ಮೆಣಸಿನಕಾಯಿ ಮತ್ತು ಮೂಲಂಗಿಗೆ ಅರಿಶಿನ, ಮೆಣಸಿನ ಪುಡಿ, ಉಪ್ಪು, ಮಾವಿನ ಪುಡಿ ಇತ್ಯಾದಿಗಳನ್ನು ಸೇರಿಸಿ.ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ ಕ್ಯಾರೆಟ್ ಉಪ್ಪಿನಕಾಯಿ ಸಿದ್ಧವಾಗುತ್ತದೆ.