alex Certify ರೈತರಿಗೆ ಸಿಎಂ ಗುಡ್ ನ್ಯೂಸ್: ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ, ಯಶಸ್ವಿನಿ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸಿಎಂ ಗುಡ್ ನ್ಯೂಸ್: ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ, ಯಶಸ್ವಿನಿ ಯೋಜನೆ ಜಾರಿ

ಬೆಂಗಳೂರು: ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಒಂದು  ಕ್ರಾಂತಿಕಾರಿ  ಹೆಜ್ಜೆಯಾಗಿದೆ. ಇದರಿಂದ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕಿನ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಇಲಾಖೆ ಸಚಿವ ಅಮಿತ್ ಶಾ ಅವರೊಂದಿಗೆ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಹಕಾರಿ ರಂಗದ ಹಾಲು ಉತ್ಪಾದಕರ ಶಕ್ತಿ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸುಮಾರು 20 ಸಾವಿರ ಕೋಟಿಯಷ್ಟು ವ್ಯವಹಾರವನ್ನು ವಿವಿಧ ಬ್ಯಾಂಕುಗಳಲ್ಲಿ ಹಾಲು ಉತ್ಪಾದಕ ಸಂಘದವರು ಮಾಡುತ್ತಾರೆ.  ಪ್ರತಿ ದಿನ ನಗದು ವ್ಯವಹಾರವಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆ ಅವರದ್ದೇ ಆದ ಬ್ಯಾಂಕ್ ಸ್ಥಾಪನೆಯಾಗಿ ಅವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಿ ಎಲ್ಲಾ ರೀತಿಯ ಸಹಾಯ ಮಾಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ:

ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಗಣಕೀಕರಣ ಕಾರ್ಯವನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿ 5775 ಕೃಷಿ ಪತ್ತಿನ ಸಹಕಾರ ಸಂಘಗಳ ಗಣ ಕೀಕರಣವನ್ನು ಒಂದೇ ವರ್ಷದಲ್ಲಿ  ಮಾಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ. ಕೇಂದ್ರ ಸರ್ಕಾರದಿಂದ ಶೇ 60 ರಷ್ಟು ಹಾಗೂ ರಾಜ್ಯ ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳು ಶೇ 40 ರಷ್ಟು ಹೂಡಿಕೆ ಮಾಡಿ ಮೂರು ವರ್ಷಗಳಲ್ಲಿ ಮಾಡುವುದನ್ನು ಒಂದೇ ವರ್ಷದಲ್ಲಿ ಸಾಧಿಸಲಾಗುವುದು ಎಂದರು.

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಹಾಲು ಒಕ್ಕೂಟ:

ಕರ್ನಾಟಕದಲ್ಲಿ 1905 ರಿಂದ ಪ್ರಾರಂಭವಾಗಿ 100 ವರ್ಷಗಳಿಗೂ ಹೆಚ್ಚು ಕಾಲ ಗ್ರಾಮೀಣ ಬದುಕಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಯಾವುದೇ ಸರ್ಕಾರಗಳಿಲ್ಲದಾಗಲೂ ಸಹಕಾರ ಇತ್ತು. ಸಹಕಾರ ಗ್ರಾಮೀಣ ಆರ್ಥಿಕ ಚಟುವಟಿಕೆಗಳಿಗೆ ಆ ಸಂದರ್ಭದಲ್ಲಿ ನೆರವಾಗಿದೆ. ಸಹಕಾರದ ಮುಖಾಂತರ ಏನೆಲ್ಲಾ ಮಾಡಲು ಸಾಧ್ಯವವಿದೆ ಎನ್ನುವುದನ್ನು ಕರ್ನಾಟಕ ಹಾಲು ಒಕ್ಕೂಟ ನಿರೂಪಿಸಿದೆ. ಹಾಲು ಒಕ್ಕೂಟ ಉತ್ತಮವಾದ ಸಂಸ್ಥೆಯಾಗಿದ್ದು, ಹಲವಾರು ರೈತರಿಗೆ ಕೃಷಿಯನ್ನು ಹೊರತುಪಡಿಸಿ ಉದ್ಯೋಗ ನೀಡಿ ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದೆ. ಅವರವರ ವ್ಯಾಪ್ತಿಯಲ್ಲಿ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕುಗಳು ಉತ್ತಮವಾಗಿ ಕೆಲಸ ಮಾಡಿ ಈ ವರ್ಷ 33 ಲಕ್ಷ ಜನರಿಗೆ ಬಡ್ಡಿ ರಹಿತ ಸಾಲ ನೀಡುವ ಸಾಮಥ್ರ್ಯ ಸಹಕಾರಿ ರಂಗಕ್ಕೆ ಬಂದಿದೆ. ಸರ್ಕಾರ ಸಹಕಾರಿ ರಂಗ ಮತ್ತು ಸಹಕಾರ ಇಲಾಖೆಯ ಜೊತೆಗಿದೆ ಎಂದರು.

ಸಹಕಾರ ಕ್ರಾಂತಿಕಾರಿ ಹೆಜ್ಜೆ:

ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಷಾ ಅವರು ಸಹಕಾರಿ ರಂಗದ ಬುನಾದಿಯನ್ನು ಬಲ್ಲವರು. ಕೃಷಿ ಇಲಾಖೆಯಿಂದ ಸಹಕಾರವನ್ನು ಬೇರ್ಪಡಿಸಿ, ಸಹಕಾರಿ ಇಲಾಖೆ ರಚಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಟ್ಟಿದ್ದಾರೆ  ಹೊಸ ಹೊಸ ಯೋಜನೆಗಳನ್ನು ಎಲ್ಲಾ ರಾಜ್ಯಗಳಿಗೆ ಸಮವಾಗಿ ನೀಡುವ ಚಿಂತನೆಯಲ್ಲಿ ಈ ಕಾರ್ಯವಾಗಿದೆ. ಸಹಕಾರಿ ಸಚಿವರ ನೇತೃತ್ವದಲ್ಲಿ ಸಹಕಾರಿ ಕ್ರಾಂತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆ ವೃದ್ಧಿಗೆ ಸಹಕಾರಿ:

ಕ್ಷೀರಕ್ರಾಂತಿಯ ಎರಡನೇ ಹೆಜ್ಜೆಯಾಗಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಯಶಸ್ವಿಯಾಗಲಿದೆ. ಈ ಬ್ಯಾಂಕುಗಳಿಗೆ 100 ಕೋಟಿ ರೂ. ಶೇರು ಬಂಡವಾಳವಾಗಿ ಸರ್ಕಾರ ನೀಡಲಿದೆ. ಎಲ್ಲ ಹಾಲು ಒಕ್ಕೂಟ ಮತ್ತು ಸಹಕಾರ ಸಂಘಗಳಿಂದ 260 ಕೋಟಿ ರೂ. ಪಡೆದುಕೊಂಡು ದೊಡ್ಡ ಮಟ್ಟದ ಸಹಕಾರಿ ಆರ್ಥಿಕತೆಗೆ ಈ ಬ್ಯಾಂಕ್ ವೇದಿಕೆಯಾಗಲಿದೆ. ಗ್ರಾಮೀಣ ಮಟ್ಟದಲ್ಲಿ ಆರ್ಥಿಕ ಚಟುವಟಿಕೆ ವೃದ್ಧಿಸಲು ಇದು ಬಹಳ ದೊಡ್ಡ ಹೆಜ್ಜೆಯಾಗಲಿದೆ. ಪ್ರತಿ ತಾಲ್ಲೂಕಿನಲ್ಲಿ ಈ ಬ್ಯಾಂಕ್ ಇರಲಿದೆ ಎಂದರು.

ಯಶಸ್ವಿನಿ ಯೋಜನೆ:

ಗ್ರಾಮೀಣ ಪ್ರದೇಶದ ರೈತ ಕುಟುಂಬಗಳಿಗೆ ಉತ್ತಮ ಹಾಗೂ ಸರಳ ಆರೋಗ್ಯ ವ್ಯವಸ್ತೆ ನೀಡುವ ‘ಯಶಸ್ವಿನಿ’ ಯೋಜನೆ ಪುನ: ಪ್ರಾರಂಭಿಸಿ 300 ಕೋಟಿಗಳನ್ನು ಆಯವ್ಯಯದಲ್ಲಿ ಮೀಸಲಿಡಲಾಗಿದೆ. 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ.ಗಳ ಕೃಷಿ ಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ರೈತರ ಸಹಕಾರಿ ಬ್ಯಾಂಕ್‍ಗಳು ಕಾರ್ಯನಿರ್ವಹಿಸಬೇಕು. ಸರ್ಕಾರ ರೈತರನ್ನು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿಯುತಗೊಳಿಸುವ ಗುರಿ ಹೊಂದಿದೆ ಎಂದರು.

ಸರ್ಕಾರದ ರೈತಪರ ಚಿಂತನೆ :

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿದಂತಾಗಿದೆ. ಗ್ರಾಮೀಣ ಪ್ರದೇಶದ ಆರ್ಥಿಕ ಸ್ಥಿತಿ ಬಲಗೊಳ್ಳಬೇಕು. ರೈತರು ಮತ್ತು ಸಹಕಾರ ಕ್ಷೇತ್ರ ಗ್ರಾಮೀಣ ಆರ್ಥಿಕತೆಯ ಆಧಾರ ಸ್ಥಂಭಗಳು.ಈ ನಿಟ್ಟಿನಲ್ಲಿ ಹೊಸ ಚಿಂತನೆಯಿಂದ ರೈತಪರ ಹಾಗೂ ಗ್ರಾಮೀಣಪರ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...