ಮುಂದಿನ ಎರಡು ದಿನಗಳ ಮಟ್ಟಿಗೆ ಯುಪಿಐ ಪಾವತಿ ವ್ಯವಸ್ಥೆಯು ಬೆಳಗ್ಗಿನ ಜಾವ 1 ರಿಂದ 3 ಗಂಟೆವರೆಗೂ ಸರಿಯಾಗಿ ಕೆಲಸ ಮಾಡದೇ ಇರುವ ಸಾಧ್ಯತೆ ಇದೆ ಎಂದು ಎನ್‌ಪಿಸಿಐ ತಿಳಿಸಿದೆ.
“ಯುಪಿಐ ವಹಿವಾಟುಗಳು ಹೆಚ್ಚುತ್ತಿರುವ ಕಾರಣ ಸೂಕ್ತವಾದ ಮೂಲಸೌಕರ್ಯ ಕಲ್ಪಿಸಲು ಮುಂದಿನ ಕೆಲ ದಿನಗಳ ಮಟ್ಟಿಗೆ, ಬೆಳಗ್ಗಿನ ಜಾವ 1ರಿಂದ 3ರವರೆಗೆ ಯುಪಿಐ ಪ್ಲಾಟ್‌ಫಾರಂ ಮೇಲ್ದರ್ಜೆಗೇರಿಸುವ ಕೆಲಸ ಚಾಲನೆಯಲ್ಲಿ ಇರಲಿದೆ” ಎಂದು ಎನ್‌ಪಿಸಿಐ ಟ್ವೀಟ್ ಮಾಡಿದೆ.
ಮೇಲ್ಕಂಡ ಪ್ರಕ್ರಿಯೆಯಿಂದ ಯಾವುದೇ ಅನಾನುಕೂಲತೆಗಳು ಆಗದೇ ಇರಲು, ಆನ್ಲೈನ್ ವಹಿವಾಟುಗಳನ್ನು ಮುಂಚಿತವಾಗಿಯೇ ಯೋಜಿಸಲು ಬಳಕೆದಾರರಿಗೆ ಸೂಚಿಸಲಾಗಿದೆ.
ಡಿಜಿಟಲ್ ಪಾವತಿ ವ್ಯವಸ್ಥೆಗಳಾದ ಗೂಗಲ್ ಪೇ, ಫೋನ್‌ಪೇಗಳೂ ಸಹ ಯುಪಿಐ ವ್ಯವಸ್ಥೆಯ ಮೇಲೆಯೇ ಕೆಲಸ ಮಾಡುತ್ತವೆ.