ಕೊರೊನಾ ಸಾಂಕ್ರಾಮಿಕದಿಂದಾಗಿ 2020ರಲ್ಲಿ ಭಾರತದ ಆಟೋಮೊಬೈಲ್ ಲೋಕದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಹೀಗಾಗಿ 2021ನ್ನ ಭರವಸೆಯ ವರ್ಷ ಎಂದು ಭಾವಿಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಈ ವರ್ಷ ಉತ್ತಮ ಕಾರು ಮಾರಾಟದ ನಿರೀಕ್ಷೆಯನ್ನ ಹೊತ್ತುಕ್ಕೊಂಡಿದೆ.
ಅಂದಹಾಗೆ ಟೊಯೋಟಾ ಕಿರ್ಲೋಸ್ಕರ್ ಈ ವರ್ಷದ ಮೇಲೆ ಇಷ್ಟೊಂದು ಭರವಸೆ ಇಟ್ಟುಕೊಳ್ಳೋಕೆ ಕಾರಣ ಏನು ಅನ್ನೋದನ್ನ ನೀವು ಕೇಳಬಹುದು. ಹೊಸ ಉತ್ಪನ್ನದ ಪ್ರಾರಂಭ ಹಾಗೂ ವರ್ಷಾಂತ್ಯದಲ್ಲಿ ಕಂಡು ಬಂದ ಆರ್ಥಿಕ ಚೇತರಿಕೆ ಈ ನಿರೀಕ್ಷೆಗೆ ಕಾರಣವಾಗಿದೆ. ಟೋಯೋಟಾ ಮೋಟರ್ಸ್ ಅಕ್ಟೋಬರ್ – ನವೆಂಬರ್ನಲ್ಲಿ ಮೋಟಾರ್ ಸಗಟು ಮಾರಾಟದಲ್ಲಿ ಶೇಕಡಾ 6ರಷ್ಟು ಏರಿಕೆ ಕಂಡಿದೆ. ಮಾತ್ರವಲ್ಲದೇ ಡಿಸೆಂಬರ್ನಲ್ಲಿ 17 ಪ್ರತಿಶತ ಏರಿಕೆ ಕಂಡಿದೆ.
ಟೋಯೋಟಾ ಮೋಟರ್ಸ್ನ ಈ ಬೆಳವಣಿಗೆ ಜನವರಿಯಲ್ಲೂ ಮುಂದುವರಿಯುತ್ತೆ ಎಂಬ ನಂಬಿಕೆಯಿದೆ. ನಾವು ಈಗಾಗಲೇ ಮಾರುಕಟ್ಟೆಗೆ ಮೂರು ಹೊಸ ಉತ್ಪನ್ನಗಳನ್ನ ಪರಿಚಯಿಸಿದ್ದೇವೆ. 2020ಕ್ಕೆ ಹೋಲಿಕೆ ಮಾಡಿದರೆ 2021ರಲ್ಲಿ ಒಳ್ಳೆಯ ಲಾಭದ ನಿರೀಕ್ಷೆಯಿದೆ ಎಂದು ಟೊಯೋಟಾ ಕಿರ್ಲೊಸ್ಕರ್ ಮೋಟರ್ಸ್ ಹಿರಿಯ ಉಪಾಧ್ಯಕ್ಷ ನವೀನ್ ಸೋನಿ ಹೇಳಿದ್ದಾರೆ.
ಟೊಯೋಟಾ ಕಂಪನಿಯು ಟೊಯೋಟಾ ಫಾರ್ಚೂನರ್ ಎಸ್ಯುವಿ, ಇನ್ನೋವಾ ಕ್ರಿಸ್ಟಾದ ಹೊಸ ಪುನರಾವರ್ತನೆ, ಟೊಯೋಟಾ ಅರ್ಬನ್ ಕ್ರೂಸರ್ನ್ನೂ ಕೆಲ ಸಮಯದ ಹಿಂದೆ ಬಿಡುಗಡೆ ಮಾಡಿದೆ. ಅಲ್ಲದೇ ಸುಜುಕಿಯೊಂದಿಗಿನ ಸಹಭಾಗಿತ್ವವೂ ನಮಗೆ ವರದಾನವಾಗಲಿದೆ ಎಂದು ಕಂಪನಿ ನಂಬಿದೆ.