ಕೋಲಾರ: ಟೊಮೆಟೊ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಮಾರಾಟಕ್ಕೆ ಬರುತ್ತಿದ್ದು, ದರ 50 ರೂ. ಆಸು ಪಾಸಿನಲ್ಲಿದೆ. ಟೊಮೆಟೊ ಬೆಳೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಗೆ ಪೂರೈಕೆ ಶೇಕಡ 75ರಷ್ಟು ಕಡಿಮೆಯಾಗಿತ್ತು. ಹೀಗಾಗಿ ಟೊಮೆಟೊ 15 ಕೆಜಿ ಬಾಕ್ಸ್ ದರ 2700 ರೂ. ಕಡಿ ದಾಟಿತ್ತು. ಕೆಲವು ಟೊಮೆಟೊ ಬೆಳೆಗಾರರು ಕೋಟ್ಯಾಧೀಶರಾಗಿದ್ದರು.
ಕಳೆದೆರಡು ದಿನಗಳಿಂದ ಟೊಮೇಟೊ ದರ ಕಡಿಮೆಯಾಗತೊಡಗಿದ್ದು, 15 ಕೆಜಿ ಕ್ರೇಟ್ ಗೆ 500 ರಿಂದ 800 ರೂ.ಗೆ ಮಾರಾಟವಾಗುತ್ತಿದೆ. ಉತ್ತಮ ಧಾರಣೆಯ ಕಾರಣ ಹೆಚ್ಚಿನ ರೈತರು ಟೊಮೆಟೊ ಬೆಳೆದಿದ್ದು ಕೊಯ್ಲಿಗೆ ಬಂದಿರುವುದರಿಂದ ಪೂರೈಕೆ ಹೆಚ್ಚಾಗಿದೆ.
ಟೊಮೆಟೊ ಬೆಲೆ ಕುಸಿತವಾಗಿದ್ದರೂ ಸದ್ಯದ ಬೆಲೆಯಲ್ಲಿ ರೈತರಿಗೆ ಯಾವುದೇ ನಷ್ಟವಾಗುವುದಿಲ್ಲ. ಇದೇ ಬೆಲೆ ಮುಂದುವರೆದರೆ ಬಂಡವಾಳದ ಜೊತೆಗೆ ಸ್ವಲ್ಪ ಆದಾಯ ಬರುತ್ತದೆ. ಗ್ರಾಹಕರಿಗೂ ಅನುಕೂಲವಾಗುತ್ತದೆ. ಮುಂದಿನ ವಾರದ ವೇಳೆಗೆ ಟೊಮೆಟೊ ದರ ಕೆಜಿಗೆ 20 ರಿಂದ 30 ವರೆಗೆ ಗ್ರಾಹಕರಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.