ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಟೊಮೆಟೊ ದರ ಮತ್ತೆ ಏರಿಕೆ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ತಂದಿದೆ. ಆದರೆ, ಇದೇ ವೇಳೆ ಈರುಳ್ಳಿ ದರ ಪಾತಾಳಕ್ಕೆ ಕುಸಿದಿರುವುದು ರೈತರಿಗೆ ಸಂಕಷ್ಟ ತಂದಿಟ್ಟಿದೆ.
ಟೊಮೇಟೊ ದರ ಬಹುತೇಕ ಕಡೆ ಕೆಜಿಗೆ 100 ರೂಪಾಯಿ ಗಡಿದಾಟಿದೆ. ಕೋಲಾರ ಜಿಲ್ಲೆಯಲ್ಲಿಯೂತು ಟೊಮೆಟೊ ದರ ಏರಿಕೆ ಕಂಡಿದ್ದು, ಕೋಲಾರ ಮಾರುಕಟ್ಟೆಯಲ್ಲಿ ಸಗಟು ದರ ಕ್ವಿಂಟಾಲ್ 6000 ರೂಪಾಯಿಗೆ ಜಿಗಿದಿದೆ. ಏಪ್ರಿಲ್ 23 ರಂದು 1 ಕ್ವಿಂಟಾಲ್ ಟೊಮೆಟೊ ಸಗಟು ದರ ಗರಿಷ್ಠ 3200 ರೂಪಾಯಿ ಇತ್ತು. ದಿನೇ ದಿನೇ ಟೊಮೆಟೊ ಬೆಲೆ ಏರಿಕೆಯಾಗುತ್ತಿರುವುದದಿಂದ ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ರಫ್ತು ನಿಷೇಧ ಸೇರಿದಂತೆ ಹಲವು ಕಾರಣಗಳಿಂದಾಗಿ ಈರುಳ್ಳಿ ದರ ಕುಸಿತ ಕಂಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ದರ ಕೆಜಿಗೆ ಕೇವಲ 3 ರೂಪಾಯಿಗೆ ಕುಸಿದಿದೆ. 50 ಕೆಜಿಗೆ 500 ರೂ. ದರ ಇದೆ. ಕೆಲವೆಡೆ ಈರುಳ್ಳಿ ದರ ಇದಕ್ಕಿಂತಲೂ ಕಡಿಮೆಯಾಗಿದೆ ಎನ್ನಲಾಗಿದೆ.
ಬೆಳೆದ ಖರ್ಚು ಮಾಡಿದ ಬೆಲೆ ಕೂಡ ರೈತರಿಗೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜಮೀನಿನಿಂದ ಮಾರುಕಟ್ಟೆಗೆ ಈರುಳ್ಳಿ ತೆಗೆದುಕೊಂಡು ಹೋದರೆ ಲಾರಿ ಬಾಡಿಗೆ ಕೂಡ ಸಿಗದ ಕಾರಣಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಸಗಟು ದರ 50 ಕೆಜಿ ಚೀಲಕ್ಕೆ 500ರಿಂದ 600 ರೂಪಾಯಿ, ಎರಡನೇ ದರ್ಜೆಯ ಈರುಳ್ಳಿ 70 ಕೆಜಿ ಚೀಲದ ಸಗಟು ದರ 250 ರಿಂದ 300 ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗಿದೆ.