ಇದು ಸ್ಪರ್ಧಾ ಯುಗ. ಉದ್ಯೋಗ ಪಡೆಯಲು ಹೊಸ ಕೌಶಲ್ಯಗಳು ಬೇಕಾಗುತ್ತದೆ. ಅಪ್ಪ ನೆಟ್ಟ ಆಲದ ಮರಕ್ಕೆ ಜೋತು ಬಿದ್ರೆ ಮುಂದೆ ಬರುವುದು ಅಸಾಧ್ಯ. ಹೊಸ ಅವಶ್ಯಕತೆಗೆ ಅನುಗುಣವಾಗಿ ಕೌಶಲ್ಯ ಕಲಿತರೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಗಳಿಸಬಹುದು. ಕೌಶಲ್ಯ ವೃದ್ಧಿಸಿಕೊಳ್ಳಲು ವಯಸ್ಸು ಅಡ್ಡಿಯಾಗುವುದಿಲ್ಲ. ಮನಸ್ಸಿದ್ದರೆ ಯಾವ ವಯಸ್ಸಿನಲ್ಲಿಯಾದ್ರೂ ಕೌಶಲ್ಯ ವೃದ್ಧಿಸಿಕೊಳ್ಳಬಹುದು. ಇದಕ್ಕೆ ಕೆಲ ಉದಾಹರಣೆಗಳು ಇಲ್ಲಿವೆ.
ನಾಗ್ಪುರದ 52 ವರ್ಷದ ವಸುಧಾ ರಾಜ್ವಾಡೆ, ಬ್ರೆಡ್ ಮತ್ತು ಕೇಕ್ ವ್ಯವಹಾರವನ್ನು ಹೆಚ್ಚಿಸಲು ಆಹಾರ ಸಂಗ್ರಾಹಕರೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ಹೆಚ್ಚಿನ ಯಶಸ್ಸು ಮಾತ್ರ ಸಿಕ್ಕಿರಲಿಲ್ಲ. ಇದ್ರ ಬಗ್ಗೆ ಚರ್ಚಿಸಿದಾಗ, ಉತ್ಪನ್ನದ ಕಳಪೆ ಫೋಟೋ ವಿಫಲತೆಗೆ ಕಾರಣ ಎಂಬುದು ಗೊತ್ತಾಯ್ತು. ಈ ಕಾರಣದಿಂದಾಗಿ ವಸುಧಾ 2020 ರಲ್ಲಿ ಮಲ್ಟಿಮೀಡಿಯಾ ಇನ್‌ಸ್ಟಿಟ್ಯೂಟ್‌ನಲ್ಲಿ ಛಾಯಾಗ್ರಹಣ ಮತ್ತು ವಿಡಿಯೋ ಕೋರ್ಸ್ ಮಾಡಿದರು. 10 ತಿಂಗಳ ಆನ್‌ಲೈನ್ ಕೋರ್ಸ್ ಮಾಡಿಕೊಂಡರು. ಅದರ ನಂತರ ಅವರು ಕೇಕ್ ನ ಉತ್ತಮ ಫೋಟೋ ತೆಗೆಯಲು ಸಮರ್ಥರಾಗಿದ್ದಾರೆ.
ಈ ರಾಜ್ಯದಲ್ಲಿದ್ದಾರೆ ಅತಿ ಹೆಚ್ಚು ಮಹಿಳಾ ಪೊಲೀಸರು…!
ಬೆಂಗಳೂರಿನ 50 ವರ್ಷದ ವಾಸುದೇವ್ ಮೂರ್ತಿ ಮ್ಯಾನೇಜ್ಮೆಂಟ್ ಶಿಕ್ಷಕರಾಗಿದ್ದಾರೆ. ಅವರು ಅನೇಕ ನಿರ್ವಹಣಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಸಮಯದ ಬದಲಾವಣೆಯೊಂದಿಗೆ, ಅವರು ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳುವ ಅಗತ್ಯವಿದೆ ಎಂಬುದನ್ನು ಅರಿತುಕೊಂಡರು. ಹಾಗಾಗಿ ವಾಸುದೇವ್ ಮೂರ್ತಿ ಆನ್‌ಲೈನ್ ಪ್ಲಾಟ್‌ಫಾರ್ಮ್ ಗ್ರೇಟ್ ಲರ್ನಿಂಗ್‌ನಲ್ಲಿ ಎಐ-ಎಂಎಲ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಮೆಷಿನ್ ಲರ್ನಿಂಗ್) ಕೋರ್ಸ್‌ಗೆ ಸೇರಿಕೊಂಡರು. ಈಗ ಅದನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ.
ಆನ್‌ಲೈನ್ ಅಪ್‌ಸ್ಕಿಲ್ಲಿಂಗ್ ವ್ಯವಹಾರ ಸುಮಾರು 18,215 ಕೋಟಿ ರೂಪಾಯಿಯದ್ದಾಗಿದೆ. 30 ರಿಂದ 45 ವರ್ಷದೊಳಗಿನ ಹೆಚ್ಚಿನ ಜನರು ಆನ್‌ಲೈನ್ ಕೋರ್ಸ್‌ಗಳ ಮೂಲಕ ಇದನ್ನು ಕಲಿಯುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಲ್ಲಿ, ಆನ್‌ಲೈನ್ ಅಪ್‌ಸ್ಕಿಲ್ಲಿಂಗ್ ಕೋರ್ಸ್ ಮಾಡಿದವರಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ಶೇಕಡಾ 40 ರಷ್ಟಿದೆ. ಕೊರೊನಾ ಸಾಂಕ್ರಾಮಿಕ ರೋಗವು ಹೊಸ ಕೌಶಲ್ಯಗಳನ್ನು ಬೆಳೆಸಲು ಜನರನ್ನು ಒತ್ತಾಯಿಸಿದೆ.