ವಾಟ್ಸಾಪ್ನ ಸೇವಾನಿಯಮದ ಬಳಿಕ ಉಂಟಾದ ವಿವಾದದ ಲಾಭ ಪಡೆದ ಟೆಲಿಗ್ರಾಂ ನಾಗಾಲೋಟದಲ್ಲಿ ಸಾಗುತ್ತಿದೆ. ಈ ಮೂಲಕ ಜನವರಿಯಿಂದ ಅತಿ ಹೆಚ್ಚು ಡೌನ್ಲೋಡ್ ಆದ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸೆಂಟರ್ ಟವರ್ ವರದಿಯ ಅನುಸಾರ ಟೆಲಿಗ್ರಾಂ ಜನವರಿ ತಿಂಗಳಾತ್ಯದ ವೇಳೆಗೆ ಒಟ್ಟು 69 ಮಿಲಿಯನ್ ಡೌನ್ಲೋಡ್ ಕಂಡಿದೆ. ಇದು ಉಳಿದೆಲ್ಲ ಮೆಸೇಜಿಂಗ್ ಅಪ್ಲಿಕೇಶನ್ಗೆ ಹೋಲಿಸಿದ್ರೆ ತುಂಬಾನೆ ಹೆಚ್ಚು.
ಅದರಲ್ಲೂ ಇನ್ನೊಂದು ವಿಶೇಷತೆ ಅಂದರೆ ಭಾರತದಲ್ಲಿ ಟೆಲಿಗ್ರಾಂ ಅತಿಹೆಚ್ಚು ಬಾರಿ ಅಂದರೆ 24 ಪ್ರತಿಶತ ಡೌನ್ಲೋಡ್ ಆಗಿದೆ. ಭಾರತವನ್ನ ಬಿಟ್ಟರೆ ಇಂಡೋನೇಷಿಯಾ ಎರಡನೇ ಸ್ಥಾನದಲ್ಲಿದೆ. ಈ ದೇಶದಲ್ಲಿ 10 ಪ್ರತಿಶತ ಡೌನ್ಲೋಡ್ ಮಾಡಲಾಗಿದೆ.
ಹೀಗಾಗಿ ಟೆಲಿಗ್ರಾಂ ವಾಟ್ಸಾಪ್ನ ವಿವಾದಿತ ಸೇವಾ ನಿಯಮದ ಲಾಭವನ್ನ ಪಡೆಯೋದರ ಜೊತೆಗೆ ಭಾರತೀಯ ಬಳಕೆದಾರರ ನೆರವಿನಿಂದ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಜನವರಿ ತಿಂಗಳಲ್ಲಿ ಕೇವಲ ಭಾರತ ದೇಶದಲ್ಲೊಂದೇ ಟೆಲಿಗ್ರಾಂ 15 ಮಿಲಿಯನ್ ಡೌನ್ಲೋಡ್ ಕಂಡಿದೆ. ಈ ಸಂಖ್ಯೆಯು ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಡೌನ್ಲೋಡ್ ಕಾಣಲು ಟೆಲಿಗ್ರಾಂಗೆ ನೆರವಾಗಿದೆ.
ಇದಕ್ಕೂ ಮೊದಲು ಅಂದರೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಟೆಲಿಗ್ರಾಂ 9 ಹಾಗೂ 10ನೇ ಸ್ಥಾನದಲ್ಲಿತ್ತು. ಕಳೆದ ವರ್ಷ 58 ಮಿಲಿಯನ್ ಡೌನ್ಲೋಡ್ ಮೂಲಕ ವಾಟ್ಸಾಪ್ ನಂಬರ್ 1 ಸ್ಥಾನದಲ್ಲಿತ್ತು. ಈ ಹೊಸ ಸೇವಾ ನಿಯಮದ ವಿವಾದದ ಬಳಿಕ 5ನೇ ಸ್ಥಾನಕ್ಕೆ ಇಳಿದಿದೆ.
ಟೆಲಿಗ್ರಾಂ ಬಳಿಕ ಟಿಕ್ಟಾಕ್ ವಿಶ್ವದಲ್ಲಿ ಅತಿ ಹೆಚ್ಚು ಡೌನ್ಲೋಡ್ ಕಂಡಿದೆ. ಈ ಚೀನಿ ಅಪ್ಲಿಕೇಶನ್ 62 ಮಿಲಿಯನ್ ಡೌನ್ಲೋಡ್ ಹೊಂದಿದೆ. ಟಿಕ್ಟಾಕ್ ಬಳಕೆದಾರರು ಚೀನಾ ಹಾಗೂ ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಸಿಗ್ನಲ್ ಅಪ್ಲಿಕೇಶನ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಫೇಸ್ಬುಕ್ ಇದೆ.