ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ.
ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ ಪೇಯಗಳಿಗೆ ಹಿಂದೆಂದಿಗಿಂತಲೂ ಈಗ ಸಾಕಷ್ಟು ಬೇಡಿಕೆ ಇದೆ. ಕೋವಿಡ್-19 ಸೋಂಕಿಗೆ ಚುಚ್ಚುಮದ್ದು ಸಿಗುವವರೆಗೂ ಕೋಟ್ಯಂತರ ಜನರು ತಂತಮ್ಮ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಹಣ್ಣು-ತರಕಾರಿ, ಸೊಪ್ಪು, ಜ್ಯೂಸ್, ಔಷಧೀಯ ಗಿಡಮೂಲಿಕೆಗಳ ಸೇವನೆ ಮೂಲಕ ತಂತಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ನೋಡುತ್ತಾರೆ.
ಕೋಲ್ಕತ್ತಾದ ಸಿಹಿ ಅಂಗಡಿಯೊಂದು ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ತಮ್ಮ ಹೊಸ ಸಿಹಿ ತಿನಿಸೊಂದರಲ್ಲಿ ರುಚಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನೂ ಸಹ ವರ್ಧಿಸುವ ಅಂಶಗಳನ್ನು ಸೇರಿಸುತ್ತಿರುವುದಾಗಿ ಹೇಳಿಕೊಂಡಿದೆ.
15 ಬಗೆಯ ಗಿಡಮೂಲಿಕೆಗಳಿಂದ ಈ ಇಮ್ಯೂನಿಟಿ ಸಂದೇಶ್ ಹೆಸರಿನ ಸಿಹಿಯನ್ನು ತಯಾರಿಸಿರುವುದಾಗಿ ಕೋಲ್ಕತ್ತಾದ ಅತ್ಯಂತ ಹಳೆಯ ಸಿಹಿ ಅಂಗಡಿಗಳಲ್ಲಿ ಒಂದಾದ ಬಲರಾಮ್ ಮುಲ್ಲಿಕ್ & ರಾಧಾರಾಮ್ ಮುಲ್ಲಿಕ್ ಮಾಲೀಕ ಸುದೀಪ್ ಮುಲ್ಲಿಕ್ ತಿಳಿಸಿದ್ದಾರೆ.
ಯಾವುದೇ ಕೃತಕ ವಸ್ತುಗಳನ್ನು ಸೇರಿಸದೇ ಹಿಮಾಲಯದ ಜೇನುತುಪ್ಪ ಬಳಸಿ ಈ ಸಿಹಿ ಖಾದ್ಯ ತಯಾರಿಸಿರುವುದಾಗಿ ಮುಲ್ಲಿಕ್ ತಿಳಿಸುತ್ತಾರೆ. ಅರಿಶಿನ, ಏಲಕ್ಕಿ, ಲವಂಗ, ಶುಂಠಿ, ಕರಿಮೆಣಸು, ಗಂಗಾಜಲ ಸೇರಿದಂತೆ ಅನೇಕ ಪದಾರ್ಥಗಳನ್ನು ಈ ಸಿಹಿ ಖಾದ್ಯಕ್ಕೆ ಬೆರೆಸಲಾಗಿದೆ.