ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳೊಂದಿಗೆ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರಿಂದಾಗಿ ಮನೆಯಲ್ಲೇ ಉಳಿದುಕೊಂಡಿರುವ ಅನೇಕರು ಸೂಪರ್ ಮಾರ್ಕೆಟ್ ಗಳಿಂದ ಆನ್ಲೈನ್ ಮೂಲಕ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರೆ.
ಆದರೆ, ಕೆಲವು ಸೂಪರ್ ಮಾರ್ಕೆಟ್ ಗಳು ತಮ್ಮಲ್ಲಿರುವ ಹಳೆಯ ಸ್ಟಾಕ್ ಗಳನ್ನು ಕೂಡ ವಿಲೇವಾರಿ ಮಾಡತೊಡಗಿದ್ದಾರೆ. ಕೆಲವೊಮ್ಮೆ ಅವಧಿ ಮೀರಿದ ವಸ್ತುಗಳನ್ನು ಕೂಡ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬಂದಿದೆ.
ಗ್ರಾಹಕರು ಮನೆಯಿಂದಲೇ ತಮಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುತ್ತಾರೆ. ಗ್ರಾಹಕರು ಮನೆಬಾಗಿಲಿಗೆ ಬಂದ ಬಾಕ್ಸ್ ಓಪನ್ ಮಾಡಿದ ನಂತರವೇ ಕೆಲವೊಮ್ಮೆ ಅವಧಿ ಮೀರಿದ ವಸ್ತುಗಳು, ಕೊಳೆತ ತರಕಾರಿಗಳು ಇರುವುದು ಕಂಡು ಬರುತ್ತದೆ. ಕೆಲವು ಸೂಪರ್ ಮಾರ್ಕೆಟ್ ಗಳಿಂದ ತರಿಸಲಾದ ವಸ್ತುಗಳು ಈ ರೀತಿ ಆಗಿದೆ ಎಂದು ಹೇಳಲಾಗಿದೆ.
ಅವಧಿ ಮೀರಿದ, ಹಾಳಾದ ವಸ್ತುಗಳು ಬಂದ ಸಂದರ್ಭದಲ್ಲಿ ಕಸ್ಟಮರ್ ಕೇರ್ ಗೆ ಕರೆ ಮಾಡಿದರೆ ಯಾವುದೇ ರಿಪ್ಲೈ ಇರುವುದಿಲ್ಲ. ಇಲ್ಲವೇ ಗಮನಿಸುತ್ತೇವೆ ಎಂದಷ್ಟೇ ಹೇಳುತ್ತಾರೆ. ಇನ್ನು ಸೂಪರ್ ಮಾರ್ಕೇಟ್ ನವರು ಆರ್ಡರ್ ಪಡೆಯುವ ಸಂದರ್ಭದಲ್ಲಿ ತಮ್ಮಲ್ಲಿ ಗ್ರಾಹಕರು ಬಯಸಿದ ವಸ್ತು ಇಲ್ಲದಿದ್ದರೂ ಬುಕ್ ಮಾಡಿಕೊಳ್ಳುತ್ತಾರೆ. ಮೊದಲಿಗೆ ತಮ್ಮಲ್ಲಿ ಸ್ಟಾಕ್ ಇಲ್ಲದಿರುವ ಬಗ್ಗೆ ತಿಳಿಸಿರುವುದಿಲ್ಲ. ಅದನ್ನು ತಲುಪಿಸಿರುವುದೂ ಇಲ್ಲ. ಹಲವು ಪ್ರಯತ್ನಗಳ ನಂತರ ಈ ಹಣವನ್ನು ರೀಫಂಡ್ ಮಾಡುತ್ತಾರೆ. ಆದರೆ, ಅದಕ್ಕಾಗಿ ಅನೇಕ ಬಾರಿ ಪ್ರಯತ್ನಿಸಿ ಕಾಯಲೇಬೇಕಾದ ಪರಿಸ್ಥಿತಿ ಇದೆ.
ಲಾಕ್ಡೌನ್ ಇರುವುದರಿಂದ ಹೊರಗೆ ತಿರುಗಾಡುವಂತಿಲ್ಲ. ಹೀಗಾಗಿ ಬಹುತೇಕರು ಸೂಪರ್ ಮಾರ್ಕೆಟ್ ಗಳಿಂದ ಆನ್ಲೈನ್ ಮೂಲಕ ವಸ್ತುಗಳನ್ನು ತರಿಸಿಕೊಳ್ಳುತ್ತಾರೆ. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡ ಕೆಲವು ಸೂಪರ್ ಮಾರ್ಕೆಟ್ ನವರು ಅಳಿದುಳಿದ ಹಳೆಯ ವಸ್ತುಗಳನ್ನು ಕೂಡ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಾರೆ. ಕೆಲವೊಮ್ಮೆ ಹಾಳಾದ ವಸ್ತುಗಳನ್ನು ಕೂಡ ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.