ಭಾರತದ ಅತಿ ದೊಡ್ಡ ಇ ಕಾಮರ್ಸ್ ವೇದಿಕೆಗಳಲ್ಲಿ ಒಂದಾದ ಸ್ನ್ಯಾಪ್ಡೀಲ್ ಅಮೆರಿಕ ರಿಪ್ರೆಸೆಂಟೇಟಿವ್ ಮಾಡಿರುವ ಆರೋಪವನ್ನ ತಳ್ಳಿ ಹಾಕಿದೆ. ಯುಎಸ್ ಟ್ರೇಡ್ ರೆಪ್ರೆಸೆಂಟಿವ್ ಸ್ನಾಪ್ಡೀಲ್ ಕಂಪನಿಯನ್ನ ವಂಚಕ ಮಾರುಕಟ್ಟೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.
ಯುಎಸ್ಟಿಆರ್ ಕಚೇರಿ ಹೊರಡಿಸಿದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯ ಪೈಕಿ ಸ್ನಾಪ್ಡೀಲ್ ಸೇರಿದಂತೆ ಭಾರತದ ನಾಲ್ಕು ಶಾಪಿಂಗ್ ಸಂಕೀರ್ಣಗಳು ಸೇರಿವೆ.ಸ್ನ್ಯಾಪ್ಡೀಲ್ ಸೇರಿದಂತೆ ಹಲವು ಮಾರುಕಟ್ಟೆಗಳನ್ನ ಈ ವಂಚಕರ ಪಟ್ಟಿಯಲ್ಲಿ ಸೇರಿಸಲಾಗಿದೆ.
ಆದರೆ ಈ ಆರೋಪವನ್ನ ತಳ್ಳಿ ಹಾಕಿರುವ ಸ್ನಾಪ್ಡೀಲ್ ವಕ್ತಾರ ಇದು ತಪ್ಪು ತಿಳುವಳಿಕೆಯ ಆಧಾರದ ಮೇಲೆ ಮಾಡಿರುವ ವರದಿಯಾಗಿದೆ ಎಂದು ಹೇಳಿದ್ದಾರೆ. ಯುಎಸ್ಟಿಆರ್ ಈ ವರದಿಯನ್ನ ಉದ್ದೇಶಪೂರ್ವಕವಾಗಿ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ನಮ್ಮ ವರ್ಚಸ್ಸನ್ನ ಹಾಳು ಮಾಡಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಸ್ನಾಪ್ಡೀಲ್ ಬಗ್ಗೆ ಯುಎಸ್ಟಿಆರ್ ಮಾಡಿರುವ ವರದಿ ವಾಸ್ತವಿಕವಾಗಿ ತಪ್ಪಾಗಿದೆ. ಹಾಗೂ 2019ರ ವರದಿಯಲ್ಲಿ ಮಾಡಿದ್ದ ಸುಳ್ಳುಗಳನ್ನ ಪುನರಾವರ್ತಿಸಿದೆ, ಇದನ್ನ ನಾವು ಬಲವಾಗಿ ಖಂಡಿಸುತ್ತೇವೆ ಎಂದು ವಕ್ತಾರರು ತಿಳಿಸಿದ್ದಾರೆ. ಯುಎಸ್ಟಿಆರ್ ತನ್ನ ವರದಿಯಲ್ಲಿ ಸ್ನಾಪ್ಡೀಲ್ ಕಳೆದ ವರ್ಷದಿಂದ ಆನ್ಲೈನ್ ಮಾರುಕಟ್ಟೆಯಲ್ಲಿ ನಕಲಿ ಉತ್ಪನ್ನಗಳ ಪ್ರಮಾಣ ಹೆಚ್ಚಾಗಿದೆ ಎಂದು ಆರೋಪಿಸಿದೆ.