ಶಾಪಿಂಗ್ ನಂತರ ಹಣ ಪಾವತಿಸಲು ಡೆಬಿಟ್ ಕಾರ್ಡ್ ಅಥವಾ ಮೊಬೈಲ್ ಫೋನ್ ಅಪ್ಲಿಕೇಶನ್ ಅಗತ್ಯವಿಲ್ಲ. ಈ ಕೆಲಸವನ್ನು ಈಗ ವಾಚ್ ಮೂಲಕ ಮಾಡಬಹುದು. ವಾಚ್ ದೈತ್ಯ ಟೈಟಾನ್ ಕಂಪನಿ ಮೊದಲ ಬಾರಿಗೆ ವಾಚ್ ಮೂಲಕ ಕಾಂಟ್ಯಾಕ್ಟ್ ಲೆಸ್ ಪೇಮೆಂಟ್ ಬೆಂಬಲಿಸುವ 5 ವಾಚ್ ಬಿಡುಗಡೆ ಮಾಡಿದೆ. ಈ ವೈಶಿಷ್ಟ್ಯಕ್ಕಾಗಿ, ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.
ಶಾಪಿಂಗ್ ನಂತರ ಹಣ ಪಾವತಿಸುವ ವೇಳೆ ಪಿಒಎಸ್ ಯಂತ್ರದ ಬಳಿ ಹೋಗಿ ಟೈಟಾನ್ ಪೇ ಪವರ್ ವಾಚ್ ಟ್ಯಾಪ್ ಮಾಡಿದ್ರೆ ಹಣ ಪಾವತಿಯಾಗುತ್ತದೆ. ಎಸ್‌ಬಿಐ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. 2000 ರೂಪಾಯಿಗಳವರೆಗೆ ಶಾಪಿಂಗ್ ಮಾಡಿದ್ರೆ ಈ ಸೌಲಭ್ಯ ಸಿಗಲಿದೆ.
ಗಡಿಯಾರವನ್ನು ಟ್ಯಾಪ್ ಮಾಡುವ ಮೂಲಕ, ಪಾವತಿ ಮಾಡಬೇಕು.ಇದಕ್ಕೆ ಯಾವುದೇ ಪಿನ್ ಅಗತ್ಯವಿರುವುದಿಲ್ಲ. 2000 ರೂಪಾಯಿಗಳಿಗಿಂತ ಹೆಚ್ಚಿನ ಪಾವತಿ ವೇಳೆ ಪಿನ್ ನಮೂದಿಸಬೇಕಾಗುತ್ತದೆ. ಪುರುಷರಿಗಾಗಿ ಮೂರು ಹಾಗೂ ಮಹಿಳೆಯರಿಗಾಗಿ ಎರಡು ಡಿಸೈನ್ ನ ವಾಚನ್ನು ಕಂಪನಿ ಬಿಡುಗಡೆ ಮಾಡಿದೆ. ಪುರುಷರ ವಾಚ್ ನ ಆರಂಭಿಕ ಬೆಲೆ 2,995 ರೂಪಾಯಿ. 3,995 ರೂಪಾಯಿ ಮತ್ತು 5,995 ರೂಪಾಯಿಗೆ ವಾಚ್ ಲಭ್ಯವಿದೆ. ಮಹಿಳೆಯರ ವಾಚ್ ಬೆಲೆ 3,895 ರೂಪಾಯಿ ಮತ್ತು 4,395 ರೂಪಾಯಿ.