ಮಹಿಳೆಯರನ್ನು ಸಬಲೀಕರಣಗೊಳಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಪಿಎನ್‌ಬಿ ಮಹಿಳೆಯರ ಸಹಾಯಕ್ಕಾಗಿ ಮತ್ತೊಮ್ಮೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರದಿಂದಲೂ ನೆರವು ಸಿಗ್ತಿದೆ. ಈ ಕಾರ್ಯಕ್ರಮಕ್ಕೆ ಹೆಸರನ್ನು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಮಹಿಳೆಯರಿಗೆ ನೀಡುವ ವಿಶೇಷ ತರಬೇತಿ ಬಗ್ಗೆ ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. ಆನ್ಲೈನ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಏಪ್ರಿಲ್ 15.
ಪಿಎನ್‌ಬಿಯ ಈ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸಹಯೋಗದೊಂದಿಗೆ ನಡೆಸಲಾಗುವುದು. ಉದ್ಯಮಶೀಲತೆಯ ಮೂಲಕ ಮಹಿಳೆಯರ ಸಬಲೀಕರಣ ಎಂದು ಇದಕ್ಕೆ ಬ್ಯಾಂಕ್ ಹೆಸರಿಟ್ಟಿದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ https://innovateindia.mygov.in/ncw-challenge/ ಗೆ ಭೇಟಿ ನೀಡಬಹುದು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ 6 ವಾರಗಳ ಕಾಲ ತರಬೇತಿ ನೀಡಲಾಗುವುದು. ಯಾವುದೇ ಸ್ಥಳದಿಂದಲೂ ಮಹಿಳೆಯರು ಇದರಲ್ಲಿ ಭಾಗವಹಿಸಬಹುದು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಸ್ಪರ್ಧಿಗಳಿಗೆ ‘ಡು ಯುವರ್ ವೆಂಚರ್’ ಸಿದ್ಧಾಂತದ ಮೂಲಕ ಉದ್ಯಮ ಪ್ರಾರಂಭಿಸುವ ಬಗ್ಗೆ ದಾರಿ ತೋರಲಾಗುವುದು.
ಈ ಕೋರ್ಸ್‌ಗಾಗಿ ಪ್ರತಿದಿನ 3 ರಿಂದ 4 ಗಂಟೆಗಳ ಸಮಯವನ್ನು ನೀಡಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳಬೇಕು. ಕಾರ್ಯಕ್ರಮಕ್ಕಾಗಿ ವಿಡಿಯೊವನ್ನು ಕಳುಹಿಸಬೇಕು. ಅದು ಕನಿಷ್ಠ 5 ನಿಮಿಷ ಇರಬೇಕು. ವಿಡಿಯೊವನ್ನು ಹಿಂದಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ರೆಕಾರ್ಡ್ ಮಾಡಬೇಕು. ಈ ಕಾರ್ಯಕ್ರಮದಡಿ ಉದ್ಯಮಿಗಳಾಗುವ ಕನಸು ಕಾಣುತ್ತಿರುವ 5000 ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಮಹಿಳೆಯರಿಗೆ ಐಐಎಂ ಪ್ರಾಧ್ಯಾಪಕರು ತರಬೇತಿ ನೀಡಲಿದ್ದಾರೆ.