ನವದೆಹಲಿ: ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ ಪೇ ವಿದೇಶಗಳಲ್ಲಿಯೂ ತನ್ನ ಸೇವೆ ಆರಂಭಿಸಿದೆ.
ಯುಪಿಐ ಆಧಾರಿತ ಹಣ ವರ್ಗಾವಣೆ ಆಪ್ ಫೋನ್ ಪೇ ವಿದೇಶದಲ್ಲೂ ಹಣ ಪಾವತಿಸುವ ವೈಶಿಷ್ಟವನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮಾದರಿಯ ಸೇವೆ ಒದಗಿಸುತ್ತಿರುವ ದೇಶದ ಮೊದಲ ಆಪ್ ಎಂಬ ಹಿರಿಮೆಗೆ ಫೋನ್ ಪೇ ಪಾತ್ರವಾಗಿದೆ.
ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್ ರೀತಿಯಲ್ಲಿಯೇ ಫೋನ್ ಪೇ ಕಾರ್ಯ ನಿರ್ವಹಿಸಲಿದೆ. ಈ ಅಪ್ಲಿಕೇಶನ್ ಬಳಸಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿದೇಶಗಳಲ್ಲಿ ಹಣ ಪಾವತಿಸಿದಾಗ ಅಲ್ಲಿನ ಹಣದ ಮೌಲ್ಯವೇ ಸಂದಾಯವಾಗುತ್ತದೆ. ಇದರಿಂದ ವಿದೇಶಿ ಪ್ರಯಾಣ ಕೈಗೊಳ್ಳುವ ಭಾರತೀಯರಿಗೆ ಅನುಕೂಲವಾಗಲಿದೆ. ಆರಂಭಿಕವಾಗಿ ಸಿಂಗಾಪುರ, ಮಾರಿಷಸ್, ನೇಪಾಳ, ಯುಎಇ ಹಾಗೂ ಭೂತಾನ್ ದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ.