ರಿಲಯನ್ಸ್ ಕಂಪನಿ ಒಡೆತನದ ಜಿಯೋ ನೆಟ್ವರ್ಕ್ನ ಟವರ್ಗಳು ಹಾಗೂ ಸೇವಾ ಮಳಿಗೆಗಳಿಗೆ ಉಂಟಾಗುತ್ತಿರುವ ಹಾನಿ ವಿರುದ್ಧ ಸರ್ಕಾರಗಳ ತುರ್ತು ಹಸ್ತಕ್ಷೇಪ ಕೋರಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸೋಮವಾರ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ಗೆ ಮೊರೆ ಹೋಗಿದೆ. ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಘಟಕವು ದುಷ್ಕರ್ಮಿಗಳು ಈ ರೀತಿ ತೊಂದರೆ ನೀಡಲು ವ್ಯಾಪಾರ ಪ್ರತಿಸ್ಪರ್ಧಿಗಳು ನೆರವು ನೀಡಿದ್ದಾರೆ ಎಂದು ಆರೋಪಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಿಲಯನ್ಸ್ ಜಿಯೋ, ದುಷ್ಕರ್ಮಿಗಳ ಕೃತ್ಯದಿಂದಾಗಿ ಸಾವಿರಾರು ಉದ್ಯೋಗಿಗಳ ಕೆಲಸಕ್ಕೆ ಅಪಾಯ ಉಂಟಾಗುವಂತಾಗಿದೆ. ಈ ಎರಡು ರಾಜ್ಯಗಳಲ್ಲಿ ನಮ್ಮ ಘಟಕ ನಡೆಸುತ್ತಿರುವ ಮೂಲ ಸೌಕರ್ಯ ಹಾಗೂ ಸೇವಾ ಮಳಿಗೆಗಳಿಗೆ ಹಾನಿ ಹಾಗೂ ಅಡ್ಡಿ ಉಂಟು ಮಾಡಲಾಗಿದೆ. ಈ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡ ದುಷ್ಕರ್ಮಿಗಳಿಗೆ ವ್ಯಾಪಾರ ಪ್ರತಿಸ್ಪರ್ಧಿಗಳು ಸಾಥ್ ನೀಡಿದ್ದಾರೆ ಎಂದು ಆರೋಪಿಸಿದೆ.
ಪಂಜಾಬ್ನಲ್ಲಿ 9000 ಜಿಯೋ ಟವರ್ಗಳಲ್ಲಿ ಸುಮಾರು 1500 ಟವರ್ಗಳಿಗೆ ವಿದ್ಯುತ್ ಸರಬರಾಜನ್ನ ಕಡಿತಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನೇ ನೆಪ ಮಾಡಿಕೊಂಡು ರಿಲಯನ್ಸ್ ಕಂಪನಿಯ ವಿವಿಧ ಮಳಿಗೆಗಳನ್ನ ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದ್ದು, ಇದರ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತಾನು ಈ ಹಿಂದೆ ಯಾವುದೇ ಕಾರ್ಪೋರೇಟ್ ಅಥವಾ ಗುತ್ತಿಗೆ ಕೃಷಿಯನ್ನು ಮಾಡಿಲ್ಲ ಮತ್ತು ಈ ವ್ಯವಹಾರವನ್ನು ಪ್ರವೇಶಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ಗೂ ಕೃಷಿ ಮಸೂದೆಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದೆ.