ಹೊಸ ವರ್ಷಕ್ಕೆ ಕಾಲಿಡೋಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಹೊಸ ವರ್ಷದ ಜೊತೆಗೆ ಹೊಸ ರೂಲ್ಸ್ ಹೊಸ ಸೌಲಭ್ಯ ಕೂಡ ನಾಳೆಯಿಂದ ನಮ್ಮದಾಗಲಿದೆ. ಫಾಸ್ಟ್ಟ್ಯಾಗ್ ಕಡ್ಡಾಯ, ಪಾಸಿಟಿವ್ ಪೇ ವ್ಯವಸ್ಥೆ ಸೇರಿದಂತೆ ಅನೇಕ ನಿಯಮಗಳು ನಾಳೆಯಿಂದ ಜಾರಿಯಾಗಲಿವೆ.
1. ಚೆಕ್ಗಳಿಗೆ ಪಾಸಿಟಿವ್ ಪೇ ವ್ಯವಸ್ಥೆ: ಭಾರತೀಯ ರಿಸರ್ವ್ ಬ್ಯಾಂಕ್ ನಾಳೆಯಿಂದ ಪಾಸಿಟಿವ್ ಪೇ ಸಿಸ್ಟಮ್ನ್ನ ಬ್ಯಾಂಕ್ಗಳಲ್ಲಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ವ್ಯವಸ್ಥೆಯಡಿಯಲ್ಲಿ 50 ಸಾವಿರಕ್ಕೂ ಹೆಚ್ಚು ರೂಪಾಯಿಗಳ ಚೆಕ್ ವ್ಯವಹಾರ ನಡೆಸುವ ಗ್ರಾಹಕರು ಬ್ಯಾಂಕ್ಗೆ ಹೆಚ್ಚಿನ ದಾಖಲೆಗಳನ್ನ ಸಲ್ಲಿಸಬೇಕಾಗುತ್ತೆ.
2. ಸಂಪರ್ಕ ರಹಿತ ಕಾರ್ಡ್ ವ್ಯವಹಾರದ ಮಿತಿ ಏರಿಕೆ: ಈವರೆಗೆ 2000 ರೂಪಾಯಿ ಹೊಂದಿದ್ದ ಸಂಪರ್ಕ ರಹಿತ ಕಾರ್ಡ್ ವಹಿವಾಟಿನ ಮಿತಿಯನ್ನ ಆರ್ಬಿಐ ನಾಳೆಯಿಂದ 5 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಲಿದೆ. ಡಿಜಿಟಲ್ ಪೇಮೆಂಟ್ಗೆ ಹೆಚ್ಚಿನ ಒತ್ತನ್ನ ನೀಡುವ ಸಲುವಾಗಿ ಆರ್ಬಿಐ ಈ ಕ್ರಮ ಕೈಗೊಂಡಿದೆ.
3. ಯುಪಿಐ ವ್ಯವಹಾರಕ್ಕೆ ಹೆಚ್ಚುವರಿ ಶುಲ್ಕ: ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಮೂಲಕ ಮಾಡುವ ಪೇಮೆಂಟ್ ನಾಳೆಯಿಂದ ದುಬಾರಿಯಾಗಲಿದೆ. ಈ ಯುಪಿಐ ಬಳಕೆದಾರರು ಈ ವ್ಯವಹಾರಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತೆ .
4. ಸಣ್ಣ ಉದ್ಯಮದ ಮೇಲೆ ಜಿಎಸ್ಟಿ ಪ್ರಭಾವ: 5 ಕೋಟಿ ರೂಪಾಯಿ ವಾರ್ಷಿಕ ಆದಾಯ ಹೊಂದಿರುವ ಉದ್ಯಮಿಗಳು ಇನ್ಮೇಲೆ 12 ಜಿಎಸ್ಟಿ ಸೇಲ್ಸ್ ರಿರ್ಟನ್ಸ್ ಸಲ್ಲಿಸುವ ಬದಲು ನಾಲ್ಕು ಜಿಎಸ್ಟಿ ಸೇಲ್ಸ್ ರಿರ್ಟನ್ಸ್ ಸಲ್ಲಿಕೆ ಮಾಡಲಿದ್ದಾರೆ. ಈ ಬದಲಾವಣೆ 9.4 ಮಿಲಿಯನ್ ಸಣ್ಣ ಉದ್ದಿಮೆದಾರರ ಮೇಲೆ ಪರಿಣಾಮ ಬೀರಲಿದೆ.
5. ನಾಳೆಯಿಂದ ಫಾಸ್ಟ್ಟ್ಯಾಗ್ ಕಡ್ಡಾಯ: ನಾಳೆಯಿಂದ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಿ ಇರಲಿದೆ. ಟೋಲ್ಗಳಲ್ಲಿ ವಾಹನ ಸಂದಣಿ ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
6. ಕಡಿಮೆ ಪ್ರೀಮಿಯಂಗೆ ಸರಳ ಜೀವ ವಿಮೆ: ಜನವರಿ 1ರಿಂದ ಕಡಿಮೆ ಪ್ರೀಮಿಯಂಗೆ ಸರಳ ಜೀವನ ವಿಮೆಯನ್ನ ಖರೀದಿ ಮಾಡಬಹುದಾಗಿದೆ. ಎಲ್ಲಾ ವಿಮಾ ಕಂಪನಿಗಳ ನಿಯಮ ಹಾಗೂ ಮೊತ್ತ ಒಂದೇ ಆಗಿರುತ್ತದೆ.
7. ಲ್ಯಾಂಡ್ಲೈನ್ನಿಂದ ಮೊಬೈಲ್ ಸಂಖ್ಯೆಗೆ ಕರೆ: ಲ್ಯಾಂಡ್ಲೈನ್ನಿಂದ ಮೊಬೈಲ್ ನಂಬರ್ಗೆ ಕರೆ ಮಾಡುವ ಮುನ್ನ ನೀವು ಇನ್ಮೇಲೆ ಮೊದಲು 0 ಸಂಖ್ಯೆಯನ್ನ ಸೇರಿಸಬೇಕಾಗುತ್ತೆ. ಈ ನಿಯಮ ಜನವರಿ 15ರಿಂದ ಜಾರಿಗೆ ಬರಲಿದೆ.
8. ಎಲ್ಪಿಜಿ ದರ: 2021ರ ಮೊದಲ ತಿಂಗಳಿನಿಂದ ಎಲ್ಪಿಜಿ ಸಿಲಿಂಡರ್ನ ಬೆಲೆ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಆಗಲಿದೆ. ಅಂತಾರಾಷ್ಟ್ರೀಯ ರೂಪಾಯಿ ಮಾನದಂಡ ಹಾಗೂ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಆಧರಿಸಿ ದರ ಪರಿಷ್ಕರಣೆ ಆಗಲಿದೆ.
9. ಕಾರು ಹಾಗೂ ಎಲೆಕ್ಟ್ರಾನಿಕ್ ಸೌಲಭ್ಯಗಳ ದರ ಏರಿಕೆ: ಮಾರುತಿ ಸುಝುಕಿ, ಮಹೀಂದ್ರಾ & ಮಹೀಂದ್ರಾ ಕಂಪನಿಗಳ ವಾಹನಗಳ ದರ ಏರಿಕೆಯಾಗಲಿದೆ. ಬಿಡಿ ಭಾಗಗಳ ದರ ಏರಿಕೆಯಾದ ಹಿನ್ನೆಲೆ ವಾಹನಗಳ ಬೆಲೆ ನಾಳೆಯಿಂದ ಏರಿಕೆ ಕಾಣಲಿದೆ. ಕಾರುಗಳ ಜೊತೆಯಲ್ಲಿ ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ಗಳ ದರವೂ 10 ಪ್ರತಿಶತದಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ.
10. ಆಯ್ದ ಮೊಬೈಲ್ಗಳಲ್ಲಿ ಮಾತ್ರ ವಾಟ್ಸಾಪ್ ಸೌಕರ್ಯ: ಜನವರಿ 1ರಿಂದ ವಾಟ್ಸಾಪ್ ಕೆಲ ವೇದಿಕೆಗಳಿಂದ ತನ್ನ ಬೆಂಬಲವನ್ನ ಹಿಂಪಡೆಯಲಿದೆ. ಹೀಗಾಗಿ ಓಎಸ್ 4.0.3 ಹೊಂದಿರುವ ಆಂಡ್ರಾಯ್ಡ್ ಫೋನ್ಗಳು ಹಾಗೂ ಐಒಎಸ್ 9 ಹೊಂದಿರುವ ಐಫೋನ್, ಜಿಯೋ ಫೋನ್ ಹಾಗೂ ಜಿಯೋ ಫೋನ್ 2ಗಳಿಗೆ ವಾಟ್ಸಾಪ್ ಸೌಕರ್ಯ ಇರಲಿದೆ.