ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ದೊಡ್ಡ ಶ್ರೀಮಂತ ವ್ಯಕ್ತಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕೋಟ್ಯಾಧಿಪತಿ ಮುಖೇಶ್ ಅಂಬಾನಿಯನ್ನ ಚೀನಾದ ಪ್ರತಿಷ್ಠಿತ ವಾಟರ್ ಕಂಪನಿ ಮಾಲೀಕ ಜೊಂಗ್ ಶನ್ಶಾನ್ ಹಿಂದಿಕ್ಕಿದ್ದಾರೆ.
ಈ ವರ್ಷ ಲೋನ್ ವೂಲ್ಫ್ ಖ್ಯಾತಿಯ ಶನ್ಶಾನ್ ಆಸ್ತಿಯ ನಿವ್ವಳ ಮೌಲ್ಯವು 70.9 ಶತಕೋಟಿ ಮೌಲ್ಯದಿಂದ 77.8 ಶತಕೋಟಿಗೆ ಏರಿಕೆ ಕಂಡಿದೆ. ಈ ಮೂಲಕ ಶನ್ಶಾನ್ ಇಡೀ ವಿಶ್ವದಲ್ಲಿ 11ನೇ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನೂ ಅಲಂಕರಿಸಿದ್ದಾರೆ. ಅಲ್ಲದೆ ಇವರ ಆಸ್ತಿ ಗಳಿಕೆ ಇತಿಹಾಸದಲ್ಲೇ ಅತ್ಯಂತ ವೇಗವಾದ ಸಂಪತ್ತು ಕ್ರೋಢೀಕರಣಗಳಲ್ಲಿ ಒಂದಾಗಿದೆ.
66 ವರ್ಷದ ಶನ್ಶಾನ್ ತನ್ನ ಸ್ವಂತ ಉದ್ಯಮ ಆರಂಭಿಸುವ ಮೊದಲು ಪತ್ರಿಕೆ ವರದಿಗಾರ, ಔಷಧ ತಯಾರಕ ಹಾಗೂ ಪಾನೀಯ ಮಾರಾಟದ ಏಜೆಂಟ್ ಆಗಿ ಕೆಲಸ ಮಾಡಿದ್ದರು. ಶನ್ಶಾನ್ ಮಾಲೀಕತ್ವದ ವಾಟರ್ ಬಾಟಲ್ ಚೀನಾದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟಾರೆಂಟ್ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಕಂಪನಿಯು ಚಹಾ, ಜ್ಯೂಸ್ ಹಾಗೂ ರುಚಿ ರುಚಿಯಾದ ವಿಟಮಿನ್ ಪಾನೀಯಗಳನ್ನೂ ಮಾರಾಟ ಮಾಡುತ್ತೆ. ಬ್ಲೂಮ್ ಬರ್ಗ್ ಸೂಚ್ಯಂಕ ನೀಡಿರುವ ವರದಿ ಪ್ರಕಾರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಪತ್ತು ಹೆಚ್ಚಳ ಮಾಡಿಕೊಂಡ ಮೊದಲ ವ್ಯಕ್ತಿ ಶನ್ಶಾನ್ ಎಂದು ಹೇಳಿದೆ.