alex Certify ಸ್ವಸಹಾಯ ಗುಂಪುಗಳ ಸದಸ್ಯರಿಗೆ ಭರ್ಜರಿ ಸುದ್ದಿ: ಉತ್ಪನ್ನಗಳ ಮಾರಾಟಕ್ಕೆ ಜಿಯೋಮಾರ್ಟ್ – ಗ್ರಾಮೀಣಾಭಿವೃದ್ಧಿ ಸಚಿವಾಲಯ ಒಪ್ಪಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಸಹಾಯ ಗುಂಪುಗಳ ಸದಸ್ಯರಿಗೆ ಭರ್ಜರಿ ಸುದ್ದಿ: ಉತ್ಪನ್ನಗಳ ಮಾರಾಟಕ್ಕೆ ಜಿಯೋಮಾರ್ಟ್ – ಗ್ರಾಮೀಣಾಭಿವೃದ್ಧಿ ಸಚಿವಾಲಯ ಒಪ್ಪಂದ

ನವದೆಹಲಿ: ರಿಲಯನ್ಸ್ ರೀಟೇಲ್ ನ ಜಿಯೋಮಾರ್ಟ್ ಜತೆಗೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದೆ.

ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಯೋಮಾರ್ಟ್ ಜತೆಗೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಗ್ರಾಮೀಣ ಜೀವನೋಪಾಯ ಹೆಚ್ಚುವರಿ ಕಾರ್ಯದರ್ಶಿ ಚರಣ್ ಜಿತ್ ಸಿಂಗ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಈ ಒಪ್ಪಂದ ಮಾಡಿಕೊಂಡಿರುವುದರಿಂದ ಸ್ವಸಹಾಯ ಗುಂಪುಗಳು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಜಿಯೋಮಾರ್ಟ್ ನಲ್ಲಿ ಮಾರಾಟಗಾರರು ಎಂದು ಸೇರ್ಪಡೆ ಆಗಬಹುದು. ಹೀಗೆ ಸೇರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಅನುಕೂಲ ಆಗಲಿದೆ. ಇದರೊಂದಿಗೆ ಸ್ವಸಹಾಯ ಗುಂಪುಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಈ ಗುಂಪುಗಳ ಉತ್ಪನ್ನಗಳು ಜಿಯೋಮಾರ್ಟ್ ಮೂಲಕವಾಗಿ ಭಾರತದಾದ್ಯಂತ ಇರುವಂಥ ಗ್ರಾಹಕರಿಗೆ ತಲುಪುತ್ತದೆ. ಈಗ ಗ್ರಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಜಿಯೋಮಾರ್ಟ್ ಮಧ್ಯೆ ಆಗಿರುವ ಈ ಒಪ್ಪಂದದಿಂದ ಈ ಸ್ವಸಹಾಯ ಗುಂಪುಗಳು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ನಲ್ಲಿ ಕಾಣಿಸಿಕೊಂಡರೆ ತಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಹಾಗೂ ಅನುಕೂಲಗಳನ್ನು ಪಡೆಯುತ್ತಾರೆ ಎಂದರು.

ಸ್ವಸಹಾಯ ಗುಂಪುಗಳಲ್ಲಿನ ಸದಸ್ಯರ ಆದಾಯ ಹೆಚ್ಚಳ ಆಗಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಡುತ್ತಿರುವ ಪ್ರಯತ್ನಕ್ಕೆ ಈ ಒಪ್ಪಂದದಿಂದ ದೊಡ್ಡ ಮಟ್ಟದಲ್ಲಿ ಬಲ ದೊರೆಯಲಿದೆ. ಈ ಮಿಷನ್ ಕೆಲಸ ಮಾಡುತ್ತಿರುವುದೇ ಸ್ವಸಹಾಯ ಗುಂಪುಗಳ ಆದಾಯವನ್ನು ಸುಸ್ಥಿರತೆ ಆಧಾರದಲ್ಲಿ ಹೆಚ್ಚಳ ಮಾಡಬೇಕು ಎಂಬ ನಿಟ್ಟಿನಲ್ಲಿ ಮತ್ತು ಈಗಿನ ಹೆಜ್ಜೆಯು ನಮ್ಮ ಪ್ರಯತ್ನದಲ್ಲಿ ಪ್ರಮುಖವಾಗುತ್ತದೆ ಎಂದು ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವಾಲಯ ಇಲಾಖೆ ಜಂಟಿ ಕಾರ್ಯದರ್ಶಿ ಸ್ವಾತಿ ಶರ್ಮಾ ಅವರು ಇದರಲ್ಲಿ ಭಾಗೀ ಆಗುತ್ತಿರುವವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸ್ವಸಹಾಯ ಗುಂಪುಗಳ ಜೀವನೋಪಾಯಕ್ಕೆ ಬೇಕಾದ ಎಲ್ಲ ರೀತಿಯ ಅವಕಾಶಳ ವಿಸ್ತರಣೆಗೆ ಬೆಂಬಲಿಸುವುದಕ್ಕೆ ಸಚಿವಾಲಯವು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜಿಯೋಮಾರ್ಟ್ ಜತೆಗೆ ಮಾಡಿಕೊಂಡಿರುವ ಸಹಭಾಗಿತ್ವವು ಸಹಾಯ ಮಾಡಲಿದೆ ಎಂದು ಹೇಳಿದರು.

ರಿಲಯನ್ಸ್ ರೀಟೇಲ್ ಲಿಮಿಟೆಡ್‌ನ ಸಾರ್ವಜನಿಕ ನೀತಿ ಮತ್ತು ನಿಯಂತ್ರಣ ವಿಭಾಗದ ಅಧ್ಯಕ್ಷರು ಮತ್ತು ಮುಖ್ಯಸ್ಥ ಡಾ. ರವಿ ಪ್ರಕಾಶ್ ಗಾಂಧಿ ಅವರು ಮಾತನಾಡಿ, ಈ ಪಾಲುದಾರಿಕೆಯು ಭವಿಷ್ಯದಲ್ಲಿ ಇಂತಹ ಅನೇಕ ಉತ್ತಮ ಸಹಭಾಗಿತ್ವಕ್ಕೆ ನಮ್ಮ ಮೊದಲ ಹೆಜ್ಜೆಯಾಗಿದೆ. ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ನಾವು ದೃಢವಾಗಿ ನಂಬುತ್ತೇವೆ ಮತ್ತು ಸ್ವೀಕರಿಸುತ್ತೇವೆ ಮತ್ತು ಈ ಪಾಲುದಾರಿಕೆಯು ನಮ್ಮ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ನಮ್ಮ ಕೈ ಜೋಡಿಸಲು ಸಹಾಯ ಮಾಡುತ್ತದೆ ಎಂದರು.

ನಾವು ದೇಶದಲ್ಲಿ ಡಿಜಿಟಲ್ ರೀಟೇಲ್ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಈ ಸಹಯೋಗದ ಮೂಲಕ ನಾವು ಬೆಳವಣಿಗೆಯನ್ನು ಇನ್ನಷ್ಟು ಸಶಕ್ತಗೊಳಿಸಲು ಬಯಸುತ್ತೇವೆ ಮತ್ತು ಲಕ್ಷಾಂತರ ಸ್ವಸಹಾಯ ಸಂಘಗಳ ಡಿಜಿಟಲೈಸೇಷನ್  ಸುಲಭಗೊಳಿಸಲು ಬಯಸುತ್ತೇವೆ. ಈ ಉಪಕ್ರಮವು ಭಾರತದಲ್ಲಿನ ಸ್ಥಳೀಯ ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಗಳ ಜೀವನವನ್ನು ಪರಿವರ್ತಿಸುವಲ್ಲಿ ಮತ್ತು ಜೀವನೋಪಾಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ತಮ್ಮ ಖಾತೆಯನ್ನು ತೆರೆಯುವುದಕ್ಕೆ ಮತ್ತು ನಿರ್ವಹಿಸುವುದಕ್ಕೆ ಜಿಯೋಮಾರ್ಟ್ ಬೆಂಬಲಿಸುತ್ತದೆ. ಇದರ ಜತೆಗೆ ಪೋರ್ಟಲ್‌ನಲ್ಲಿ ಮಾರಾಟದ ಅನುಭವವನ್ನು ಪರಿಚಯಿಸಲು ಮಾರಾಟಗಾರರಿಗೆ ಅನುವು ಮಾಡಿಕೊಡಲು ಜಿಯೋಮಾರ್ಟ್ ಹಾಗೂ ಸಚಿವಾಲಯದ ತರಬೇತಿಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತದೆ. ನಿರಂತರ ಬೆಳವಣಿಗೆ ಮತ್ತು ವ್ಯಾಪಾರ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಜಿಯೋಮಾರ್ಟ್ ನಿಂದ ಮಾರಾಟಗಾರರಿಗೆ ತಮ್ಮ ವ್ಯಾಪಾರವನ್ನು ಮಾರುಕಟ್ಟೆಯಲ್ಲಿ ಬೆಳೆಯಲು ಸಹಾಯ ಮಾಡಲು ನಂತರದ ಪ್ರಾರಂಭದ ತರಬೇತಿ ಮತ್ತು ಬೆಂಬಲವನ್ನು ನೀಡುತ್ತದೆ. ಪ್ಲಾಟ್ ಫಾರ್ಮ್ ನಲ್ಲಿ ವಿವಿಧ ಮಾರ್ಕೆಟಿಂಗ್ ಪ್ರಚಾರಗಳಲ್ಲಿ ಭಾಗವಹಿಸಲು ಸಹ ಅವಕಾಶ ನೀಡುತ್ತದೆ.

ಈ ಒಪ್ಪಂದವು ಸಾಂಪ್ರದಾಯಿಕ ಜವಳಿಗಳಿಂದ ಅಡುಗೆ ಮನೆಯ ವಸ್ತುಗಳು, ಗೃಹಾಲಂಕಾರ ಮತ್ತು ಸೌಂದರ್ಯ ಉತ್ಪನ್ನಗಳವರೆಗೆ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳ ಶ್ರೇಣಿಯನ್ನು ಒದಗಿಸುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ SARAS ಸಂಗ್ರಹ ಬ್ರಾಂಡ್‌ನ ಅಡಿಯಲ್ಲಿ ಸ್ವ ಸಹಾಯ ಗುಂಪುಗಳನ್ನು ಜಿಯೋಮಾರ್ಟ್ ಗೆ ತರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...