
ಧಾರವಾಡ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಬೆಳೆ ಹಾನಿ ಸಂಭವಿಸಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಹಾಲು ಉತ್ಪಾದಕ ರೈತರಿಗೆ ಹಾಲು ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಒಕ್ಕೂಟದ ಆರ್ಥಿಕ ಸ್ಥಿತಿಗತಿಗಳನ್ನು ಅನುಸರಿಸಿ, ಹಾಲಿನ ಶೇಖರಣಾ ದರವನ್ನು ಹೆಚ್ಚಳ ಮಾಡಲು ಶನಿವಾರ ನಡೆದ ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಒಕ್ಕೂಟದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಶಂಕರ ವೀರಪ್ಪ ಮುಗದ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರಿಷ್ಕೃತ ಹಾಲಿನ ದರ ಅಕ್ಟೋಬರ್ 1 ರಿಂದ ಜಾರಿಗೆ ಬಂದಿದೆ. ಪ್ರತಿ ಲೀಟರ್ ಆಕಳು ಹಾಗೂ ಎಮ್ಮೆ ಹಾಲಿಗೆ 1 ರೂ.ಗಳಂತೆ ಹೆಚ್ಚಿಸಿ ಹಾಲು ಶೇಖರಿಸಲಾಗುತ್ತಿದೆ.
3.5 ರಷ್ಟು ಜಿಡ್ಡು ಇರುವ ಪ್ರತಿ ಲೀಟರ್ ಆಕಳ ಹಾಲಿಗೆ 26 ರೂ.ಗಳಂತೆ ಮತ್ತು ಸರ್ಕಾರದ ಪ್ರೋತ್ಸಾಹಧನ ರೂ. 5 ಸೇರಿ ಒಟ್ಟು 31 ರೂ. ಹಾಗೂ ಶೇ. 6 ರಷ್ಟು ಜಿಡ್ಡು ಇರುವ ಪ್ರತಿ ಲೀಟರ್ ಎಮ್ಮೆ ಹಾಲಿಗೆ 41 ರೂ. ಮತ್ತು ಸರ್ಕಾರದ ಪ್ರೋತ್ಸಾಹಧನ ರೂ.5 ಸೇರಿ ಒಟ್ಟು 46 ರೂ.ಗಳು ಹಾಲು ಉತ್ಪಾದಕರಿಗೆ ದೊರೆಯಲಿದೆ.
ಇದರ ಪ್ರಯೋಜನವನ್ನು ಎಲ್ಲ ಹಾಲು ಉತ್ಪಾದಕರು ಪಡೆದುಕೊಳ್ಳಬೇಕೆಂದು ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಒಕ್ಕೂಟದ ಅಧ್ಯಕ್ಷ ಶಂಕರ ವೀರಪ್ಪ ಮುಗದ ಅವರು ತಿಳಿಸಿದ್ದಾರೆ.