ಬೆಂಗಳೂರು: ವಿದ್ಯುತ್ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗಿದೆ. ಗೃಹಜ್ಯೋತಿ ಯೋಜನೆ ಜಾರಿಯಾಗುವುದರಿಂದ ಬಹುತೇಕರು ಫ್ರೀ ವಿದ್ಯುತ್ ಸೌಲಭ್ಯ ಪಡೆಯಬಹುದು.
ವಿದಯುತ್ ದರ ಹೆಚ್ಚಳದ ಬೆನ್ನಲ್ಲೇ ಹಾಲಿನ ದರ ಹೆಚ್ಚಳದ ಶಾಕ್ ನೀಡುವ ಸಾಧ್ಯತೆ ಇದೆ. ಹಾಲಿನ ದರ ಪರಿಷ್ಕರಣೆಗೆ ಹಾಲು ಒಕ್ಕೂಟಗಳು ಪಟ್ಟು ಹಿಡಿದಿದ್ದು, ಪ್ರತಿ ಲೀಟರ್ ಹಾಲಿನ ದರವನ್ನು 5 ರೂಪಾಯಿ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ಬಮೂಲ್ ಚಿಂತನೆ ನಡೆಸಿದೆ.
ಹಾಲು ಉತ್ಪಾದಕ ರೈತರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಕಡಿತಗೊಳಿಸಲು ಹಾಲು ಒಕ್ಕೂಟಗಳು ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ರೈತರ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸದೇ ಯಥಾಸ್ಥಿತಿ ಮುಂದುವರಿಸುವಂತೆ ಸೂಚನೆ ನೀಡಿದ್ದಾರೆ.
ಕಡಿತಗೊಳಿಸಿದ್ದ ಪ್ರೋತ್ಸಾಹ ಧನವನ್ನು ರೈತರಿಗೆ ಮತ್ತೆ ನೀಡಲು ಹಾಲು ಒಕ್ಕೂಟಗಳು ಮುಂದಾಗಿವೆ. ಹಾಲಿನ ದರ ಪರಿಷ್ಕರಿಸುವಂತೆ ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿವೆ. ಒಂದು ಲೀಟರ್ ಹಾಲಿನ ಬೆಲೆಯನ್ನು 5 ರೂಪಾಯಿ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದ್ದಾರೆ.
ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 39 ರೂಪಾಯಿ ಇದ್ದು, ಹಾಲು ಉತ್ಪಾದಕರ ಸಂಘಕ್ಕೆ 35.50 ರೂ. ಕೊಡಲಾಗುತ್ತಿದೆ. ಮಾರಾಟಗಾರರಿಗೆ ಪ್ರತಿ ಲೀಟರ್ ಗೆ 2 ರೂಪಾಯಿ ಕಮಿಷನ್ ನೀಡಬೇಕು. ಇದರ ನಡುವೆ ಕೇವಲ 1.50 ರೂ. ಅಂತರವಿದ್ದು, ಇಷ್ಟು ಲಾಭದಿಂದ ವ್ಯವಹಾರ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಾಲಿನ ದರವನ್ನು ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿದೆ.