ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಲಾಗಿದೆ.
ಲೀಟರ್ ಗೆ 1.75 ರೂ. ಕಡಿತಗೊಳಿಸಿದ್ದು, ಈ ಮೂಲಕ ಮತ್ತೊಮ್ಮೆ ಹಾಲಿನ ದರ ಕಡಿತಗೊಳಿಸಿ ಹೈನುಗಾರರಿಗೆ ಶಾಕ್ ನೀಡಿದೆ.
ಜೂನ್ ತಿಂಗಳಿನಲ್ಲಿ ಮನ್ಮುಲ್ ಒಂದು ರೂಪಾಯಿ ಕಡಿತಗೊಳಿಸಿತ್ತು. ಇದೀಗ ರೈತರಿಂದ ಖರೀದಿಸುವ ಹಾಲಿನ ದರದಲ್ಲಿ ಲೀಟರ್ ಗೆ 1.75 ರೂ. ಕಡಿತಗೊಳಿಸಲಾಗಿದೆ. ಇಂದಿನಿಂದಲೇ ಪರಿಷ್ಕೃತ ಆದೇಶ ಜಾರಿಗೆ ಬಂದಿದೆ. ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರೆಯಲಿದೆ. ಜುಲೈ 13 ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಮುಂಗಾರು ಆರಂಭ ಹಿನ್ನಲೆ ದರ ಕಡಿತ ಮಾಡಲಾಗಿದೆ. ಪ್ರತಿ ಲೀಟರ್ ಗೆ 2 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗಿತ್ತು. ಹಾಲು ಉತ್ಪಾದಕರಿಗೆ 32.25 ರೂ. ಬದಲು 30.50 ರೂ. ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.