ಬೆಂಗಳೂರು: ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾಲು ಖರೀದಿ ದರದಲ್ಲಿ ಲೀಟರ್ ಗೆ 1.50 ರೂ. ಕಡಿತಗೊಳಿಸಿ ಆದೇಶ ಹೊರಡಿಸಿದ್ದು, ಜೂ. 1 ರಿಂದ ಪರಿಷ್ಕೃತ ಆದೇಶ ಜಾರಿಗೆ ಬರುತ್ತದೆ.
ಬೇಸಿಗೆಯ ಕಾರಣ ಹಾಲಿನ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದ್ದು, ಹೈನುಗಾರಿಕೆಗೆ ಉತ್ತೇಜನ ನೀಡಲು ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಏಪ್ರಿಲ್ 1ರಿಂದ ಮೇ 31 ರವರೆಗೆ ಪ್ರತಿ ಲೀಟರ್ ಹಾಲಿಗೆ 2.85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಿಸಿತ್ತು.
ಒಕ್ಕೂಟದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಇದೆ. ಹಸಿರು ಮೇವಿನ ಸಮಸ್ಯೆ ಬಗೆಹರಿದಿರುವುದರಿಂದ ಹಾಲು ಉತ್ಪಾದನೆ ಹೆಚ್ಚಾಗುತ್ತಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ಪ್ರತಿದಿನ 13.50 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಈಗ 16 ಲಕ್ಷ ಲೀಟರ್ ಗೆ ತಲುಪಿದೆ. ದಿನದಲ್ಲಿ ಸುಮಾರು 2.50 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದ್ದು, ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಆಡಳಿತ ಮಂಡಳಿ ಪ್ರೋತ್ಸಾಹಧನದಲ್ಲಿ ಲೀಟರ್ ಗೆ 1.50 ರೂಪಾಯಿ ಕಡಿತಗೊಳಿಸಿದೆ.
ಹಾಲಿನ ಪರಿಷ್ಕೃತ ಖರೀದಿ ದರ ಲೀಟರ್ ಗೆ 34.25 ಆಗಿದೆ. ಇದು ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.