ಬೆಂಗಳೂರು: ಹಾಲು ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.
ಕೆಎಂಎಫ್ ಉತ್ಪನ್ನಗಳಿಗೆ ಭಾರಿ ಬೇಡಿಕೆ ಬಂದಿದೆ. ಕೆಲವು ಕಡೆ ಬೆಣ್ಣೆ, ತುಪ್ಪ ಸೇರಿದಂತೆ ಹಾಲಿನ ಉತ್ಪನ್ನಗಳು ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಸತತ ಮಳೆ, ಚರ್ಮಗಂಟು ರೋಗದಿಂದ ಹೈನುಗಾರಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ. ಉತ್ತರ ಭಾರತದ ರಾಜ್ಯಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ರಾಜ್ಯವನ್ನು ಎದುರು ನೋಡುತ್ತಿವೆ. ಉತ್ತರ ಭಾರತದ ರಾಜ್ಯಗಳಲ್ಲಿ ಚರ್ಮ ಗಂಟು ರೋಗದಿಂದ ಲಕ್ಷಾಂತರ ಜಾನುವಾರು ಮೃತಪಟ್ಟ ಕಾರಣ ಹಾಲು ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ. ಮೇವಿನ ಕೊರತೆ ಕಂಡುಬಂದಿದೆ.
ಕೆಎಂಎಫ್ ನಂದಿನಿ ಬ್ರಾಂಡ್ ಉತ್ಪನ್ನಗಳಿಗೆ ನಿರೀಕ್ಷೆಗೂ ಮೀರಿದ ಬೇಡಿಕೆ ಬಂದಿದ್ದು, ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ನಂದಿನಿ ಹಾಲು, ಮೊಸರು, ತುಪ್ಪ ಹಾಗೂ ಹಾಲಿನ ಉತ್ಪನ್ನಗಳು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಕೆಎಂಎಫ್ ನಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮು –ಕಾಶ್ಮೀರ, ಅಸ್ಸಾಂ ಹಾಗೂ ವಿದೇಶಗಳಾದ ಅಮೆರಿಕ, ಮಲೇಷ್ಯಾ, ಯುಎಇ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮೊದಲಾದ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಪ್ರಸ್ತುತ ಹಾಲಿನ ಕೊರತೆ ಕಂಡು ಬಂದ ಕಾರಣ ಬೆಣ್ಣೆ, ತುಪ್ಪ ಸೇರಿದಂತೆ ಹಾಲಿನ ಉತ್ಪನ್ನಗಳ ಉತ್ಪನ್ನ ಪ್ರಮಾಣ ಕಡಿಮೆ ಮಾಡಲಾಗಿದೆ. ಹೊರ ರಾಜ್ಯ ಮತ್ತು ವಿದೇಶಗಳಿಗೆ ರಫ್ತು ಸ್ಥಗಿತಗೊಳಿಸಿ ಸ್ಥಳೀಯ ಮಾರುಕಟ್ಟೆಗೆ ಬೇಡಿಕೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
2022ರ ಜೂನ್ ತಿಂಗಳಲ್ಲಿ ಪ್ರತಿದಿನ 94 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ದಾಖಲೆ ಬರೆದಿದ್ದ ಕೆಎಂಎಫ್ ಹಾಲು ಸಂಗ್ರಹಣೆ ಪ್ರಮಾಣ ಪ್ರಸ್ತುತ 71.67 ಲಕ್ಷ ಲೀಟರ್ ಗೆ ಕುಸಿದಿದೆ. ಹಾಲಿನ ಮಾರಾಟ ಶೇಕಡ 18 ರಷ್ಟು, ಮೊಸರು ಮಾರಾಟ ಶೇಕಡ 26ರಷ್ಟು ಹೆಚ್ಚಳವಾಗಿದೆ. ಬೇಡಿಕೆಯಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳ ಪೂರೈಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.