
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ನಂದಿನಿ ಹಾಲು ಮಾರಾಟ ಕುಸಿತವಾಗಿದೆ. ದಿನಕ್ಕೆ 88 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹವಾಗುತ್ತಿದ್ದು, ಭಾರೀ ಪ್ರಮಾಣದಲ್ಲಿ ಉಳಿಯುತ್ತಿದೆ.
ಭಾರೀ ಪ್ರಮಾಣದಲ್ಲಿ ಹಾಲು ಉಳಿಯುತ್ತಿರುವ ಕಾರಣ ವಾರಕ್ಕೆ ಎರಡು ದಿನ ಹಾಲು ಖರೀದಿ ನಿಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ. ಮೇ ಮೊದಲವಾರ ಪ್ರತಿದಿನ ಸುಮಾರು 70 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈ ವಾರ 88 ಲಕ್ಷ ಲೀಟರ್ ಹಾಲು ಬರುತ್ತಿದೆ. ಖಾಸಗಿಯವರು ಹಾಲು ಖರೀದಿ ಕಡಿಮೆ ಮಾಡಿರುವುದರಿಂದ ಮತ್ತು ಜಾನುವಾರುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೇವು ಸಿಗುತ್ತಿರುವುದರಿಂದ ಹಾಲಿನ ಪ್ರಮಾಣ ಹೆಚ್ಚಳವಾಗಿದೆ.
ಭಾರಿ ಪ್ರಮಾಣದಲ್ಲಿ ಹಾಲು ಸಂಗ್ರಹವಾಗಿ ಮಾರಾಟ ಕುಸಿತವಾಗಿರುವುದರಿಂದ ವಾರದಲ್ಲಿ 2 ದಿನ ಹಾಲು ಖರೀದಿಯನ್ನು ನಿಲ್ಲಿಸುವ ಚಿಂತನೆ ಇದೆ. ಹಾಲಿನ ಪ್ಯಾಕೆಟ್ ಮಾರಾಟ, ತುಪ್ಪ, ಬೆಣ್ಣೆ ಮೊದಲಾದ ಹಾಲಿನ ಉತ್ಪನ್ನಗಳ ತಯಾರಿಕೆಯಿಂದ 53 ಲಕ್ಷ ಲೀಟರ್ ಬಳಕೆಯಾಗಿ, 35 ಲಕ್ಷ ಲೀಟರ್ ಹಾಲನ್ನು ಪ್ರತಿದಿನ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ.
ಈಗ ಶಾಲೆಗಳು ನಡೆಯದ ಕಾರಣ ಹಾಲಿನಪುಡಿ ನೀಡುವ ಯೋಜನೆ ನಿಂತಿದೆ. ಸರ್ಕಾರ ಕೆಎಂಎಫ್ ನಿಂದ ಹಾಲಿನಪುಡಿ ಖರೀದಿಸಿ ಮಕ್ಕಳ ಮನೆಗೆ ತಲುಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಮಕ್ಕಳಿಗೆ ಹಾಲಿನ ಪುಡಿ ನೀಡಿದರೆ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಬಂದಂತಾಗುತ್ತದೆ. ಮಕ್ಕಳಿಗೂ ಪೌಷ್ಠಿಕಾಂಶ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.