ಬೆಂಗಳೂರು: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯ ವ್ಯಾಪ್ತಿ ಹೊಂದಿರುವ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಹಾಲು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಜೂನ್ 1 ರಂದು ವಿಶ್ವದಾದ್ಯಂತ ‘ವಿಶ್ವ ಹಾಲು ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುತ್ತಿರುವ ದಿನಗಳಲ್ಲಿ ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಜೂನ್ 1 ರಿಂದ 30 ರ ವರೆಗೆ ‘ಹೆಚ್ಚುವರಿ ಹಾಲು ಕುಡಿಯಿರಿ’ ಎಂಬ ಕಾರ್ಯಕ್ರಮದಡಿ ಗ್ರಾಹಕರಿಗೆ ಹೆಚ್ಚುವರಿ ಹಾಲು ಉಚಿತವಾಗಿ ನೀಡಲಾಗುತ್ತದೆ.
ಶಿವಮೊಗ್ಗ ಹಾಲು ಒಕ್ಕೂಟದಿಂದ ಮಾರಾಟವಾಗುವ ಎಲ್ಲಾ ಮಾದರಿಯ ಹಾಲಿನ 500 ಮಿ.ಲೀ. ಮತ್ತು 1000 ಮಿ.ಲೀ. ಪ್ಯಾಕ್ ನಲ್ಲಿ ಕ್ರಮವಾಗಿ 20 ಮಿ.ಲೀ. ಹಾಗೂ 40 ಮಿ.ಲೀ. ಹಾಲನ್ನು ಹೆಚ್ಚುವರಿಯಾಗಿ ಉಚಿತವಾಗಿ ಗ್ರಾಹಕರಿಗೆ ನೀಡಲಾಗುತ್ತದೆ.
ಹೆಚ್ಚುವರಿ ಹಾಲು ಸೇವನೆಯಿಂದ ಗ್ರಾಹಕರ ಆರೋಗ್ಯದಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಜೂನ್ 1 ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಹೆಚ್ಚುವರಿಯಾಗಿ ಅರ್ಧ ಲೀಟರ್ ಗೆ 20 ಮಿ.ಲೀ. ಮತ್ತು ಒಂದು ಲೀಟರ್ಗೆ 40 ಮಿ.ಲೀ. ಹಾಲನ್ನು ಪ್ಯಾಕೆಟ್ ನಲ್ಲಿ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಗ್ರಾಹಕರಿಗೆ ಇರುವ ದರ ಮಾತ್ರ ಪಾವತಿಸಬಹುದಾಗಿದೆ.
ಲಾಕ್ಡೌನ್ ಕಾರಣದಿಂದಾಗಿ ಹೆಚ್ಚುವರಿಯಾಗಿ ಹಾಲು ಸಂಗ್ರಹವಾಗುತ್ತಿದೆ. ಈ ನಿಟ್ಟಿನಲ್ಲಿ ಖರೀದಿದಾರರಿಂದ ಹಾಲು ಖರೀದಿ ಸ್ಥಗಿತಗೊಳಿಸದೇ ಗ್ರಾಹಕರು ಮತ್ತು ಹೈನುಗಾರರಿಗೆ ಅನುಕೂಲವಾಗುವಂತೆ ಕೆಲವು ಹಾಲು ಒಕ್ಕೂಟಗಳು ಉಚಿತವಾಗಿ ಹೆಚ್ಚುವರಿ ಹಾಲು ನೀಡಲು ಕ್ರಮಕೈಗೊಂಡಿವೆ ಎಂದು ಹೇಳಲಾಗಿದೆ.