ಕಚ್ಚಾ ವಸ್ತುಗಳ ದರ ಏರಿಕೆಯಿಂದಾಗಿ ಮುಂದಿನ ವರ್ಷದಿಂದ ಕಾರುಗಳ ಬೆಲೆ ಏರಿಕೆ ಮಾಡೋದಾಗಿ ಹೇಳಿದ್ದ ಮಹೀಂದ್ರ & ಮಹೀಂದ್ರಾ ಕಂಪನಿ ಇದೀಗ ಕಾರಿನ ಜೊತೆ ಜೊತೆಗೆ ವಾಣಿಜ್ಯಾತ್ಮಕ ಉದ್ದೇಶಕ್ಕೆ ಬಳಕೆಯಾಗುವ ವಾಹನಗಳ ಬೆಲೆ ಏರಿಕೆಗೂ ಸಿದ್ಧತೆ ನಡೆಸಿದೆ. ಇದರನ್ವಯ ಕಾರಿನ ಜೊತೆ ಜೊತೆಯಲ್ಲಿ ಮಹೀಂದ್ರಾ ಟ್ರ್ಯಾಕ್ಟರ್ಗಳ ಬೆಲೆಯೂ ಜನವರಿ 1ರಿಂದ ಏರಿಕೆಯಾಗಲಿದೆ.
ಮಹೀಂದ್ರ ಕಂಪನಿಯ ಟ್ರ್ಯಾಕ್ಟರ್ಗಳು ಭಾರೀ ಜನಪ್ರಿಯವಾಗಿವೆ. ಟ್ರ್ಯಾಕ್ಟರ್ ಉದ್ಯಮದ ಮೂಲಕವೇ ಮಹೀಂದ್ರಾ ಅತಿ ಹೆಚ್ಚು ಲಾಭವನ್ನೂ ಪಡೆದಿದೆ. ನವೆಂಬರ್ 2019ರಲ್ಲಿ ಮಹೀಂದ್ರಾ 20,414 ಟ್ರ್ಯಾಕ್ಟರ್ಗಳನ್ನ ಮಾರಾಟ ಮಾಡಿತ್ತು. ಅದೇ ನವೆಂಬರ್ 2020ರ ವೇಳೆಗೆ 31,619 ಟ್ರ್ಯಾಕ್ಟರ್ಗಳನ್ನ ಮಾರಾಟ ಮಾಡುವ ಮೂಲಕ 55 ಪ್ರತಿಶತ ಏರಿಕೆ ಕಂಡಿದೆ.
ಟ್ರ್ಯಾಕ್ಟರ್ ಉದ್ಯಮದಲ್ಲಿ ಇನ್ನಷ್ಟು ಸುಧಾರಣೆ ತರೋಕೆ ಮಹೀಂದ್ರಾ & ಮಹೀಂದ್ರಾ ಕಂಪನಿ ಚಿಂತನೆ ನಡೆಸಿದೆ. ವಿಶೇಷವಾಗಿ ಕೆ 2 ಶ್ರೇಣಿಯ ಟ್ರ್ಯಾಕ್ಟರ್ಗಳನ್ನ ತೆಲಂಗಾಣದ ಜಹೀರಾಬಾದ್ ಉತ್ಪಾದನಾ ಕೇಂದ್ರದಲ್ಲಿ ತಯಾರಿಸುವ ಯೋಜನೆ ಹೊಂದಿದೆ. ಈ ಹೊಸ ಶ್ರೇಣಿಗಾಗಿ ಮಹೀಂದ್ರಾ 100 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡಲಿದೆ.